Abhijeet Dipke | ಅಭಿಜಿತ್ ತಂದೆಯ ಹಣಕಾಸು ಮೂಲಗಳ ತನಿಖೆಗೆ ಆರ್‌ಟಿಐ ಕಾರ್ಯಕರ್ತನ ಆಗ್ರಹ! 
ದೇಶ

ದಿಪ್ಕೆ ವಿದೇಶಿ ಶಿಕ್ಷಣಕ್ಕೆ ಹಣ ಎಲ್ಲಿಂದ ಬಂತು..? ಅಭಿಜಿತ್ ತಂದೆಯ ಹಣಕಾಸು ಮೂಲಗಳ ತನಿಖೆಗೆ ಆರ್‌ಟಿಐ ಕಾರ್ಯಕರ್ತನ ಆಗ್ರಹ! | Abhijeet Dipke

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ತಂದೆಯ ಹಣಕಾಸಿನ ಮೂಲಗಳ ಕುರಿತು ತನಿಖೆ ನಡೆಸುವಂತೆ ಸೂರತ್ ಮೂಲದ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದು, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿರುವ ತಂದೆಯೊಬ್ಬ ತಮ್ಮ ಮಗನ ವಿದೇಶಿ ಶಿಕ್ಷಣಕ್ಕೆ ಹೇಗೆ ಹಣಕಾಸು ಒದಗಿಸಿದರು ಎಂಬುದನ್ನು ಪ್ರಶ್ನಿಸಿದ್ದಾರೆ.

ಸಿಜೆಪಿ ಪ್ರತಿಭಟನಾಕಾರರ ಕಾನೂನು ಹೋರಾಟಕ್ಕಾಗಿ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಘೋಷಿಸಿದ್ದ 1 ಕೋಟಿ ರೂಪಾಯಿ ಲೀಗಲ್ ಡಿಫೆನ್ಸ್ ಫಂಡ್ (ಕಾನೂನು ರಕ್ಷಣಾ ನಿಧಿ) ಕುರಿತು ಪರಿಶೀಲಿಸುವಂತೆ ಭಾರತೀಯ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಅಧಿಕಾರಿಗಳಿಗೆ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಪತ್ರ ಬರೆದಿದ್ದಾರೆ.
ಅಭಿಜಿತ್ ದೀಪ್ಕೆ ತಂದೆ ಭಗವಾನ್‌ರಾವ್ ದೀಪ್ಕೆ ಸರ್ಕಾರಿ ಸೇವೆಯಿಂದ ನಿವೃತ್ತರಾದ ಅಧಿಕಾರಿಯಾಗಿದ್ದು, ಅವರ ಮಗನ ಉನ್ನತ ವಿದೇಶಿ ಶಿಕ್ಷಣದ ವೆಚ್ಚವನ್ನು ಪರಿಗಣಿಸಿ ಅವರ ಆರ್ಥಿಕ ಸ್ಥಿತಿಗತಿಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ತಿವಾರಿ ಮನವಿ ಮಾಡಿದ್ದಾರೆ. ಇದರ ಜೊತೆಗೆ, ಸಿಜೆಪಿ ಪಕ್ಷದ ಪ್ರಸ್ತುತ ಸ್ಥಾನಮಾನವನ್ನು ಪ್ರಶ್ನಿಸಿರುವ ತಿವಾರಿ, ರಾಜಕೀಯ ಪಕ್ಷದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಾ ಈ ಸಂಸ್ಥೆಯು ದೇಣಿಗೆ ಅಥವಾ ಹಣವನ್ನು ಸ್ವೀಕರಿಸಬಹುದೇ ಎಂದು ಪ್ರಶ್ನಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯು ನೋಂದಣಿಯಾಗದ ಸಂಸ್ಥೆಯಾಗಿದ್ದರೂ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿರುವ ತಿವಾರಿ, ಅದಕ್ಕಾಗಿ 1 ಕೋಟಿ ರೂಪಾಯಿಯನ್ನು ಕಾನೂನು ರಕ್ಷಣಾ ನಿಧಿಯಾಗಿ ನೀಡಲು ಘೋಷಿಸಲಾಗಿದ್ದರೆ, ಸಿಜೆಪಿಯು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29A ಅಡಿಯಲ್ಲಿ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದೆಯೇ ಎಂಬುದನ್ನು ಆಯೋಗವು ಪರಿಶೀಲಿಸಬೇಕು ಎಂದಿದ್ದಾರೆ. ಒಂದು ವೇಳೆ ಅದು ನೋಂದಾಯಿತ ಪಕ್ಷವಾಗಿರದಿದ್ದರೆ, ರಾಜಕೀಯ ಪಕ್ಷದ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುವುದು ಮತ್ತು ನಿಧಿ ಸಂಗ್ರಹಿಸುವುದು ಅಥವಾ ಸ್ವೀಕರಿಸುವುದು ಕಾನೂನಾತ್ಮಕ ಪರಿಶೀಲನೆಗೆ ಒಳಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಅಮಿತ್ ತಿವಾರಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಮಂಡಳಿಯನ್ನು ಸಂಪರ್ಕಿಸಿದ್ದು, ಕಪಿಲ್ ಸಿಬಲ್ ಲೀಗಲ್ ಡಿಫೆನ್ಸ್ ಫಂಡ್‌ಗೆ ನೀಡಲು ಉದ್ದೇಶಿಸಿರುವ ಕೊಡುಗೆಗೆ ಜಿಎಸ್‌ಟಿ ಅನ್ವಯಿಸುತ್ತದೆಯೇ ಎಂಬುದನ್ನೂ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರತಿಭಟನಾಕಾರರಿಗೆ ಕಾನೂನು ನೆರವು ನೀಡಲು ಸಿಜೆಪಿ ಸ್ಥಾಪಿಸಿರುವ ನಿಧಿಗೆ 1 ಕೋಟಿ ರೂಪಾಯಿ ಕೊಡುಗೆ ನೀಡುವುದಾಗಿ ಕಪಿಲ್ ಸಿಬಲ್ ಸೋಮವಾರ ಘೋಷಿಸಿದ್ದರು(ಏಜೆನ್ಸೀಸ್​).