Kerala Congress | .ರೇಸ್​ನಲ್ಲಿದ್ದಾರೆ ಕರ್ನಾಟಕ ಕಾಂಗ್ರೆಸ್ ಟ್ರಬಲ್ ಶೂಟರ್! 
ದೇಶ

ಒಬ್ಬರಲ್ಲ, ಇಬ್ಬರಲ್ಲ.. ಕೇರಳ ಸಿಎಂ ಸ್ಥಾನಕ್ಕೆ ಮೂವರು ಪೈಪೋಟಿ...ರೇಸ್​ನಲ್ಲಿದ್ದಾರೆ ಕರ್ನಾಟಕ ಕಾಂಗ್ರೆಸ್ ಟ್ರಬಲ್ ಶೂಟರ್! | Kerala Congress

Kerala Congress: ಕೇರಳವನ್ನು ಮುಂದಿನ ಐದು ವರ್ಷಗಳ ಕಾಲ ಯಾರು ಆಳಲಿದ್ದಾರೆ ಎಂಬ ಕುತೂಹಲಕ್ಕೆ ಮೇ ಮೊದಲ ವಾರದಲ್ಲಿ ಉತ್ತರ ಸಿಗಲಿದೆ. ಆದರೆ, ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ ನಾಯಕರ ಬೆಂಬಲಿಗರು ಈಗಲೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಚಾರದಲ್ಲಿ ಮುಳುಗಿದ್ದಾರೆ. ಇದು ಕೇರಳ ಕಾಂಗ್ರೆಸ್‌ನಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಬಣ ಸಮರವನ್ನು ಮತ್ತೊಮ್ಮೆ ಬೀದಿಗೆ ತಂದಿದೆ.

ರೇಸ್‌ನಲ್ಲಿರುವವರು ಇವರೇ ನೋಡಿ!

ರಮೇಶ್ ಚೆನ್ನಿತ್ತಲ: ಹಿರಿಯ ನಾಯಕ ಪಿ.ಜೆ. ಕುರಿಯನ್ ಅವರು ರಮೇಶ್ ಚೆನ್ನಿತ್ತಲ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಚರ್ಚೆಗೆ ನಾಂದಿ ಹಾಡಿದರು. ಚೆನ್ನಿತ್ತಲ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿ ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದ್ದು ಕುತೂಹಲ ಮೂಡಿಸಿದೆ. ಆದಾಗ್ಯೂ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಚೆನ್ನಿತ್ತಲ ಸ್ಪಷ್ಟಪಡಿಸಿದ್ದಾರೆ.
ವಿ.ಡಿ. ಸತೀಶನ್: ವಿರೋಧ ಪಕ್ಷದ ನಾಯಕರಾಗಿ ಸತೀಶನ್ ಕಾರ್ಯವೈಖರಿಯೇ ಯುಡಿಎಫ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂಬುದು ಅವರ ಬೆಂಬಲಿಗರ ವಾದ. ಎರ್ನಾಕುಲಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಸತೀಶನ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಅಭಿಯಾನವು ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಕೆ.ಸಿ. ವೇಣುಗೋಪಾಲ್: ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ. ಸುಧಾಕರನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲಿಸಿರುವುದು ಕಣವನ್ನು ಮತ್ತಷ್ಟು ರಂಗೇರಿಸಿದೆ. ವೇಣುಗೋಪಾಲ್ ನಾಯಕತ್ವವನ್ನು ಉಮ್ಮನ್ ಚಾಂಡಿ ಮತ್ತು ಎ.ಕೆ. ಆಂಟನಿಯಂತಹ ದೈತ್ಯ ನಾಯಕರಿಗೆ ಹೋಲಿಸಲಾಗುತ್ತಿದೆ.

ಪಾಲುದಾರ ಪಕ್ಷಗಳ ಗರಂ... ಮುಸ್ಲಿಂ ಲೀಗ್ ಆಕ್ರೋಶ

ಕಾಂಗ್ರೆಸ್ ನಾಯಕರ ಈ ಸಿಎಂ ರೇಸ್ ಬಗ್ಗೆ ಯುಡಿಎಫ್‌ನ ಪ್ರಮುಖ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇನ್ನೂ ಮತ ಎಣಿಕೆಯೇ ನಡೆದಿಲ್ಲ, ಅದಕ್ಕೂ ಮುನ್ನವೇ ಈ ರೀತಿ ಅಧಿಕಾರಕ್ಕಾಗಿ ಕಿತ್ತಾಡುವುದು ಮತದಾರರಿಗೆ ಮಾಡುವ ಅವಮಾನ. ಕಾಂಗ್ರೆಸ್ ಹೈಕಮಾಂಡ್ ಕೂಡಲೇ ತನ್ನ ನಾಯಕರನ್ನು ನಿಯಂತ್ರಿಸಬೇಕು ಎಂದು ಐಯುಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ ಗುಡುಗಿದ್ದಾರೆ.
ಬಣ ರಾಜಕಾರಣದ ಬಿಸಿ ದೆಹಲಿಗೆ ಮುಟ್ಟುತ್ತಿದ್ದಂತೆಯೇ, ಹಿರಿಯ ನಾಯಕರು ಇದು ಚರ್ಚೆ ಎಂದು ಹೇಳುತ್ತಿದ್ದಾರೆ. ಚುನಾಯಿತ ಶಾಸಕರು ಮತ್ತು ಕೇಂದ್ರ ನಾಯಕತ್ವದ ಸಮಾಲೋಚನೆಯ ನಂತರವೇ ನಾಯಕನ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಫಲಿತಾಂಶಕ್ಕೂ ಮುನ್ನವೇ ಶುರುವಾಗಿರುವ ಈ ಕುರ್ಚಿ ಕದನ ಯುಡಿಎಫ್ ಒಕ್ಕೂಟದ ಒಗ್ಗಟ್ಟಿಗೆ ಧಕ್ಕೆ ತರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ(ಏಜೆನ್ಸೀಸ್​).