Digital Arrest Scam  
ದೇಶ

10 ಗಂಟೆ ಡಿಜಿಟಲ್​ ಅರೆಸ್ಟ್​ನಲ್ಲಿದ್ದ ಪೋಷಕರು; 5 ನಿಮಿಷದಲ್ಲಿ 8ನೇ ತರಗತಿ ಬಾಲಕ ಸ್ಮಾರ್ಟ್​ ಆಗಿ ಮಾಡಿದ್ದೇನು ಗೊತ್ತ?..Digital Arrest Scam

ಮಮತಾ

ಪ್ರಮುಖ ಮುಖ್ಯಾಂಶಗಳು

  • ಡಿಜಿಟಲ್​ ಅರೆಸ್ಟ್​ಗೆ ಒಳಗಾದ ಬರೇಲಿ ಗ್ರಾಮದ ವ್ಯಾಪಾರಿ ಮತ್ತು ಆತನ ಪತ್ನಿ
  • 10 ಗಂಟೆ ವಿಡಿಯೋ ಕಾಲ್​ನಲ್ಲಿ ಬೆದರಿಕೆ, ಹಣ ಪೀಕಲು ಯತ್ನಿಸಿದ್ದ ಸೈಬರ್​ ವಂಚಕರು
  • ಸೈಬರ್​ ಕ್ರೈಂ ಜಾಗೃತಿ ತಿಳಿದಿದ್ದ ಬಾಲಕ ಪೋಷಕರ ಮೊಬೈಲ್​ ಸ್ವಿಚ್​ ಆಫ್​ ಮಾಡಿ ಕಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿದ
  • ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಬರುವ ಯಾವುದೇ ಕರೆಯನ್ನು ನಂಬಬೇಡಿ ಎಂದು ಪೊಲೀಸರಿಂದ ಮನವಿ
ಬರೇಲಿ: ಡಿಜಿಟಲ್​ ಅರೆಸ್ಟ್​​ ಸೈಬರ್(Digital Arrest Scam )​ ವಂಚಕರಿಗೆ ಸುಲಭವಾಗಿ ಹಣ ಸಂಪಾದಿಸಲು ಇರುವ ದಾರಿಯಾಗಿ ಬಿಟ್ಟಿದೆ. ಇದು ದೇಶಾದ್ಯಂತ ಭೀತಿ ಹುಟ್ಟಿಸುತ್ತಿರುವ ಸೈಬರ್ ವಂಚನೆಯ ಜಾಲ. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಸಹ ವಿದ್ಯಾವಂತರೇ ಇಂತಹ ಕೂಪಕ್ಕೆ ಬಲಿಯಾಗುತ್ತಿದ್ದಾರೆ. ವೈದ್ಯರು, ನಿವೃತ್ತ ಶಿಕ್ಷಕರು, ಎಂಜಿನಿಯರ್​​ಗಳನ್ನೇ ಟಾರ್ಗೆಟ್​ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಕುಟುಂಬದ ಬಾಲಕ ತನ್ನ ಪೋಷಕರನ್ನು ವಂಚನೆ ಜಾಲದಿಂದ ಹೊರತಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬರೇಲಿಯ ಪ್ರೇಮ್ ನಗರದ ಎಂಟನೇ ತರಗತಿಯ ಬಾಲಕ ತನ್ಮಯ್​ನ ಚಾಕಚಕ್ಯತೆಯಿಂದ, ತಾನು ಶಾಲೆಯಲ್ಲಿ ಕಲಿತ ವಿದ್ಯೆಯಿಂದಾಗಿ ತನ್ನ ಪೋಷಕರನ್ನು ವಂಚಿಸಲು ಬಂದವರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಸದ್ಯ ಬರೇಲಿಯಲ್ಲಿ ಈತನ ದಿಟ್ಟತನಕ್ಕೆ ಜನರು ಹಾಡಿ ಹೊಗಳಿ ಕೊಂಡಾಡುತ್ತಿದ್ದಾರೆ.

ಏನಿದು ಘಟನೆ?

ತನ್ಮಯ್​ ತಂದೆ ವ್ಯಾಪಾರಿ ಸಂಜಯ್ ಸಕ್ಸೇನಾ ಅವರ ಪತ್ನಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ನಾವು ತನಿಖಾ ಸಂಸ್ಥೆಯೊಂದರಿಂದ ಕರೆ ಮಾಡುತ್ತಿದ್ದೇವೆ. ಸಕ್ಸೇನಾ ನಿಮ್ಮ ಮೇಲೆ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಪರ್ಕ ಮತ್ತು ಬಹುಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ ಎಂದು ಆರೋಪ ಹೊರಿಸಿದರು.
ನಿಮ್ಮನ್ನು 'ಡಿಜಿಟಲ್ ಅರೆಸ್ಟ್' ಮಾಡಲಾಗಿದೆ, ಕ್ಯಾಮೆರಾ ಮುಂದೆ ಕುಳಿತುಕೊಳ್ಳಬೇಕು ಮತ್ತು ಮನೆಯಿಂದ ಹೊರಬರುವಂತಿಲ್ಲ ಎಂದು ತಾಕೀತು ಮಾಡಿದ್ದರು. 10 ಗಂಟೆಗಳ ಕಾಲ ನಡೆದ ವಿಡಿಯೋ ಕಾಲ್​ನಲ್ಲಿ, ನಕಲಿ ಬಂಧನದ ವಾರೆಂಟ್ ಪ್ರದರ್ಶಿಸಿದರು. ದಂಪತಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿ, ಮಾನಸಿಕ ಕಿರುಕುಳ ನೀಡಲಾಯಿತು. ವಿಚಾರಣೆ ಸಂಪೂರ್ಣ ಪೂರ್ಣಗೊಳ್ಳುವವರೆಗೂ ಮನೆಯಿಂದ ಹೊರಗೆ ಹೋಗಬಾರದು. ವಿಡಿಯೋ ಕರೆಗೆ ಸ್ಪಂದಿಸಬೇಕು. ಊಟ ಮಾಡುವುದು, ನಿದ್ದೆ ಮಾಡುವುದು ಎಲ್ಲವೂ ಕಣ್ಮುಂದೆಯೇ ಆಗಬೇಕು ಎಂದು ವಂಚಕರು ತಿಳಿಸಿದ್ದಾರೆ.

ಬಾಲಕ ಮಾಡಿದ್ದಿಷ್ಟು

ದೀರ್ಘಾವಧಿಯ ಕರೆಯ ಸಮಯದಲ್ಲಿ, ವಂಚಕರು ಸೂಕ್ಷ್ಮ ಬ್ಯಾಂಕ್ ವಿವರಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು ಮತ್ತು ಹಣವನ್ನು ದೋಚಲು ತಯಾರಿ ನಡೆಸುತ್ತಿದ್ದರು. ಪೋಷಕರು ಭಯಗೊಂಡು ವಂಚಕರು ಹೇಳಿದಂತೆ ಮಾಡುತ್ತಿರುವುದನ್ನು ಗಮನಿಸಿದ ಅವರ ಮಗ ತನ್ಮಯ್ ತಕ್ಷಣವೇ ಇದು ಸೈಬರ್ ವಂಚನೆ ಇರಬಹುದೆಂದು ಶಂಕಿಸಿದನು. ಶಾಲೆಯಲ್ಲಿ ನಡೆದಿದ್ದ ಸೈಬರ್ ಸುರಕ್ಷತಾ ಜಾಗೃತಿ ಕಾರ್ಯಕ್ರಮದಿಂದಾಗಿ ಅವನಿಗೆ 'ಡಿಜಿಟಲ್ ಅರೆಸ್ಟ್' ವಂಚನೆಯ ಬಗ್ಗೆ ಅರಿವಿತ್ತು. ಪೋಷಕರು ವಂಚಕರೊಂದಿಗೆ ವಿಡಿಯೋ ಕರೆಯಲ್ಲಿ ಇರುವಾಗಲೇ, ಬಾಲಕನು ಸದ್ದಿಲ್ಲದೆ ತನ್ನ ಮೊಬೈಲ್‌ನಿಂದ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದನು. ಜಿತೆಗೆ ಮೊಬೈಲ್​ ಏರೋಪ್ಲೇನ್​ ಮೋಡ್​ಗೆ ಹಾಕಿದನು.

ಪೊಲೀಸರು ಹೇಳಿದ್ದೇನು?

ವಂಚಕರು ದಂಪತಿಯಿಂದ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಲು ಸಂಚು ರೂಪಿಸಿದ್ದರು, ಆದರೆ ಬಾಲಕನ ಸಮಯೋಚಿತ ನಿರ್ಧಾರದಿಂದ ದೊಡ್ಡ ಅನಾಹುತ ತಪ್ಪಿದೆ. ಮರುದಿನ ಪೋಷಕರು ಪ್ರೇಮ್​ ನಗರ ಠಾಣೆಗೆ ದೂರು ಕೊಟ್ಟರು. ಫೋನ್​ ಮತ್ತೆ ಸ್ವಿಚ್​ ಆನ್​ ಮಾಡಿದಾಗ ವಂಚಕರು ಇವರನ್ನು ಸಂಪರ್ಕಿಸಲು ಯತ್ನಿಸಿತು. ಆಗ ಪೊಲೀಸರೇ ಕರೆ ಸ್ವೀಕರಿಸಿ ಮಾತನಾಡಿದರು.
ಈ ಬಗ್ಗೆ ಎಸ್ಪಿ ಮನುಷ್ ಪರೀಕ್ ಮಾತನಾಡಿ, ಡಿಜಿಟಲ್​ ಅರೆಸ್ಟ್ ಎನ್ನುವ ವಿಧಾನವೇ ಇಲ್ಲ. ಅಪರಿಚಿತರಿಗೆ ನಿಮ್ಮ ನಂಬರ್ ಹಂಚಿಕೊಳ್ಳಲೇ ಬೇಡಿ. ಡಿಜಿಟಲ್ ಬಂಧನ ಅಥವಾ ಬೆದರಿಕೆಗಳನ್ನು ಒಳಗೊಂಡಿರುವ ಯಾವುದೇ ಕರೆಗಳನ್ನು ತಕ್ಷಣವೇ ಪೊಲೀಸರಿಗೆ ದೂರು ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.