Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Mamata Banerjee: ಮಮತಾ ಬಹುತ್ ಮಜ್ಬೂತ್ ಹೈ... ಮಾಮೂಲಿ ಆದ್ಮಿ ನಹಿ ಹೈ ಮಮತಾ– 1999ರಲ್ಲಿ ಲಾಲು ಪ್ರಸಾದ್ ಯಾದವ್ ಸಂಸತ್ತಿನಲ್ಲಿ ಮಮತಾ ಬ್ಯಾನರ್ಜಿ ಅವರ ಬೀದಿ ಹೋರಾಟದ ಕಿಚ್ಚನ್ನು ಕಂಡು ಆಡಿದ್ದ ಈ ಮಾತುಗಳು ಅಕ್ಷರಶಃ ಸತ್ಯವಾಗಿದ್ದವು. ಯಾರೂ ಧೈರ್ಯ ಮಾಡದ ಕಾಲದಲ್ಲಿ ಬಂಗಾಳದ ಪ್ರಬಲ ಎಡಪಂಥೀಯರನ್ನು ಎದುರಿಸಿ ನಿಂತಿದ್ದ ಆ ಬಿಳಿ ಸೀರೆ, ರಬ್ಬರ್ ಚಪ್ಪಲಿಯ ನಾಯಕಿ ಈಗ ತಮ್ಮ ಜೀವನದ ಅತಿದೊಡ್ಡ ರಾಜಕೀಯ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಅವರ ಭದ್ರಕೋಟೆ ಮತ್ತು ಸ್ವಕ್ಷೇತ್ರ ಭವಾನಿಪುರ ಎರಡನ್ನೂ ಬಿಜೆಪಿ ಅಳಿಸಿಹಾಕಿದೆ.
ಆದರೆ, ಮಮತಾ ಬ್ಯಾನರ್ಜಿ ಅವರನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿರುವ ವಿಚಾರವೆಂದರೆ, ಅವರು ಎಂದಿಗೂ ತಲೆ ಬಾಗದ ಕೆಚ್ಚೆದೆಯ ನಾಯಕಿ. ಗಾಯಗೊಂಡ ಹುಲಿ ಅತ್ಯಂತ ಅಪಾಯಕಾರಿ ಎಂದು 2021ರಲ್ಲಿ ವೀಲ್‌ಚೇರ್‌ನಲ್ಲಿ ಕುಳಿತು ಅವರು ಹೇಳಿದ್ದ ಮಾತುಗಳು ಈಗ ಮತ್ತೆ ಪ್ರಸ್ತುತವಾಗಿವೆ. ಹೌದು, ಮಮತಾ ಈಗ ರಾಜಕೀಯವಾಗಿ ಗಾಯಗೊಂಡಿದ್ದಾರೆ, ಆದರೆ ಅವರ ಮುಂದಿನ ನಡೆಗಳು ಪಕ್ಷದ ಭವಿಷ್ಯವನ್ನು ನಿರ್ಧರಿಸಲಿವೆ.
ಮಮತಾ ಬ್ಯಾನರ್ಜಿಯವರ ಮುಂದಿನ ದಾರಿಗಳೇನು..?
ಪ್ರಸ್ತುತ ಮಮತಾ ಮುಂದೆ ಆಯ್ಕೆಗಳು ಸೀಮಿತವಾಗಿದ್ದರೂ, ಪ್ರಸ್ತುತತೆ ಕಾಯ್ದುಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ಅವರ ಮುಂದಿರುವ ಪ್ರಮುಖ ಸಾಧ್ಯತೆಗಳು ಇಲ್ಲಿವೆ.
ಸಂಸತ್ತಿನ ಹಾದಿ..
ಭವಾನಿಪುರದಲ್ಲಿ ಸೋತ ಬಳಿಕ ಮಮತಾ ಈಗ ಶಾಸಕಿಯಾಗಿಲ್ಲ. 2021ರಲ್ಲಿ ನಂದಿಗ್ರಾಮದಲ್ಲಿ ಸೋತಾಗ ಉಪಚುನಾವಣೆಯ ಮೂಲಕ ಅವರು ವಿಧಾನಸಭೆ ಪ್ರವೇಶಿಸಿದ್ದರು. ಆದರೆ ಈಗ ಪಕ್ಷವೇ ಅಧಿಕಾರ ಕಳೆದುಕೊಂಡಿರುವುದರಿಂದ ಪರಿಸ್ಥಿತಿ ಭಿನ್ನವಾಗಿದೆ. ಟಿಎಂಸಿ ಪಾಲಿಗೆ ದೀದಿ ಏಕೈಕ ಟ್ರಂಪ್ ಕಾರ್ಡ್. ಅವರ ಜನಪ್ರಿಯತೆಗೆ ಸರಿಸಾಟಿಯಾಗಬಲ್ಲ ನಾಯಕರು ಪಕ್ಷದಲ್ಲಿ ಬೇರೆ ಯಾರೂ ಇಲ್ಲ.
ಒಂದು ಸಾಧ್ಯತೆಯ ಪ್ರಕಾರ, ಮಮತಾ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿ ಸಂಸತ್ತಿನ ಹಾದಿ ತುಳಿಯಬಹುದು. ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಬಂಗಾಳದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಡುವುದರಿಂದ ಪಕ್ಷದ ಯುವ ಕಾರ್ಯಕರ್ತರಿಗೆ ಹೊಸ ಚೈತನ್ಯ ಸಿಗಬಹುದು. ದೀದಿ ದೆಹಲಿಯಲ್ಲಿ ಕುಳಿತು 2029ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡಬಹುದು. ಇದಕ್ಕಾಗಿ ಅವರು ಟಿಎಂಸಿಯ ಭದ್ರಕೋಟೆಯಾದ ಡೈಮಂಡ್ ಹಾರ್ಬರ್‌ನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಮಮತಾಗೆ ದೆಹಲಿ ಹೊಸದೇನಲ್ಲ, ಅವರು ದಶಕಗಳ ಕಾಲ ಸಂಸದೆಯಾಗಿ, ಕೇಂದ್ರ ರೈಲ್ವೆ ಸಚಿವೆಯಾಗಿ ಅನುಭವ ಹೊಂದಿದ್ದಾರೆ.
ಮತ್ತೇ ಬೀದಿ ಹೋರಾಟಗಾರ್ತಿಯಾಗ್ತಾರಾ ದೀದಿ..?
ಎರಡನೆಯ ಮತ್ತು ಪ್ರಬಲವಾದ ಆಯ್ಕೆಯೆಂದರೆ ಮಮತಾ ಬಂಗಾಳದಲ್ಲಿಯೇ ಉಳಿದು ಆಕ್ರಮಣಕಾರಿ ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸುವುದು. 34 ವರ್ಷಗಳ ಎಡಪಂಥೀಯ ಆಳ್ವಿಕೆಯನ್ನು ಕೊನೆಗಾಣಿಸಲು ಅವರು ನಡೆಸಿದ ಬೀದಿ ಹೋರಾಟಗಳನ್ನು ಬಂಗಾಳ ಮರೆತಿಲ್ಲ.
ಬಿಜೆಪಿಗೆ ಅಧಿಕಾರ ನಡೆಸುವುದು ಸುಲಭದ ಮಾತಲ್ಲ, ಏಕೆಂದರೆ ಮಮತಾರ ತೀಕ್ಷ್ಣ ಕಣ್ಣುಗಳು ಸರ್ಕಾರದ ಪ್ರತಿಯೊಂದು ನಿರ್ಧಾರದ ಮೇಲಿರುತ್ತವೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಮಹಿಳೆಯರಿಗೆ ಮಾಸಿಕ 3,000 ರೂ. ನೆರವು, ಉದ್ಯೋಗ ಮೀಸಲಾತಿ ಮತ್ತು ಸಿಂಗೂರ್-ಡಾರ್ಜಿಲಿಂಗ್ ಅಭಿವೃದ್ಧಿಯಂತಹ ಭರವಸೆಗಳನ್ನು ಈಡೇರಿಸದಿದ್ದರೆ ಮಮತಾ ಬೀದಿಗೆ ಇಳಿಯುವುದು ಖಚಿತ. ಟಿಎಂಸಿ ಸೋತಿದ್ದರೂ ದೊಡ್ಡ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಈ ಪಡೆಯನ್ನು ಬಳಸಿ ಬಂದ್ ಅಥವಾ ಮುಷ್ಕರಗಳನ್ನು ನಡೆಸುವಲ್ಲಿ ದೀದಿ ನಿಸ್ಸೀಮರು. ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಸಿಬಿಐ ವಿರುದ್ಧ ಧರಣಿ ನಡೆಸಿ ತಮ್ಮ ಹೋರಾಟದ ಗುಣವನ್ನು ಪ್ರದರ್ಶಿಸಿದ್ದರು.
ಸೋಲಿನ ಈ ಸಂದರ್ಭದಲ್ಲಿ ಪಕ್ಷದ ವಿಶ್ವಾಸಾರ್ಹತೆ ಕುಸಿದಿದ್ದರೂ, ಮಮತಾ ಬ್ಯಾನರ್ಜಿ ಬಳಿ ಇರುವ ಅತ್ಯಂತ ದೊಡ್ಡ ಆಸ್ತಿ ಎಂದರೆ ಅವರ ಸ್ವಂತ ವ್ಯಕ್ತಿತ್ವ. ಈ ಗಾಯಗೊಂಡ ಹುಲಿ ಮುಂದಿನ ದಿನಗಳಲ್ಲಿ ಹೇಗೆ ಪುಟಿದೇಳಲಿದೆ ಎಂಬುದು ಈಗ ಇಡೀ ದೇಶದ ಕುತೂಹಲದಿಂದ ಕಾಯುತ್ತಿದೆ(ಏಜೆನ್ಸೀಸ್).