ಸ್ಟಾಲಿನ್-ಪವಾರ್ ಮನವೊಲಿಸಿದ ರೋಚಕ ಕಥೆ ಇಲ್ಲಿದೆ! 
ದೇಶ

ಕಾಂಗ್ರೆಸ್‌ನ ಆ ಒಂದು ತಪ್ಪು ಹೆಜ್ಜೆಯಿಂದ ಬದಲಾಯ್ತಾ ಲೆಕ್ಕಾಚಾರ? ಸ್ಟಾಲಿನ್-ಪವಾರ್ ಮನವೊಲಿಸಿದ ರೋಚಕ ಕಥೆ ಇಲ್ಲಿದೆ! | Delimitation Bill

Delimitation Bill: ಸಂಸತ್ತಿನಲ್ಲಿ ಸೋಮವಾರ ನಡೆಯಲಿರುವ ಲೋಕಸಭೆಯ ವಿಶೇಷ ಅಧಿವೇಶನವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪಾಲಿಗೆ ಮಹತ್ವದ ತಿರುವಾಗಲಿದೆ. ಕಳೆದ ಏಪ್ರಿಲ್‌ನಲ್ಲಿ ಕೇವಲ 54 ಮತಗಳ ಅಂತರದಿಂದ ಸೋಲುಂಡಿದ್ದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಈಗ ಅಂಗೀಕರಿಸಲು ಸರ್ಕಾರ ಸಜ್ಜಾಗಿದೆ. ಈ ಹಿಂದೆ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದ ತಮಿಳುನಾಡಿನ ಡಿಎಂಕೆ ಮತ್ತು ಮಹಾರಾಷ್ಟ್ರದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳು ಈಗ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿರುವುದು ಕಳೆದ ಎಂಟು ತಿಂಗಳ ರಾಜಕೀಯ ಬೆಳವಣಿಗೆಗಳ ಫಲ ಎಂದು ಅನೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರವು ಈ ವಿಷಯವಾಗಿ ಸುಮಾರು ಒಂದು ವರ್ಷದ ಹಿಂದೆಯೇ ಡಿಎಂಕೆ ಜೊತೆ ಮಾತುಕತೆ ಆರಂಭಿಸಿತ್ತು. ಆದರೆ, ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಿದ್ದ ಕಾರಣ ತನ್ನ ವಿರೋಧವನ್ನು ಸಡಿಲಿಸಿರಲಿಲ್ಲ. ಫೆಬ್ರವರಿಯಲ್ಲಿ ಅಂದಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದರು ಮತ್ತು ಏಪ್ರಿಲ್ 16 ರಂದು ಕೇಂದ್ರದ ಮಸೂದೆಯ ಪ್ರತಿಯನ್ನು ಸುಟ್ಟು ಇದನ್ನು ಕರಾಳ ಕಾನೂನು ಎಂದು ಕರೆದಿದ್ದರು.

ಆದರೆ, ಏಪ್ರಿಲ್‌ನಿಂದ ನವೆಂಬರ್ ನಡುವಿನ ಎಂಟು ತಿಂಗಳಲ್ಲಿ ತಮಿಳುನಾಡಿನ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಅದಲು ಬದಲಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಜೋಸೆಫ್ ವಿಜಯ್ ನೇತೃತ್ವದ ಹೊಸ ಪಕ್ಷವಾದ ತಮಿಳಗ ವೆಟ್ರಿ ಕಳಗಂ ವಿರುದ್ಧ ಸೋಲು ಕಂಡಿತು. ಒಟ್ಟು 234 ಸ್ಥಾನಗಳಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದರೆ, ಡಿಎಂಕೆ ಕೇವಲ 54 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಚುನಾವಣೆಯ ನಂತರ ಡಿಎಂಕೆಯ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್, ಡಿಎಂಕೆಯನ್ನು ತೊರೆದು ವಿಜಯ್ ಅವರ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿತು. ಇದರಿಂದ 59 ವರ್ಷಗಳ ನಂತರ ಕಾಂಗ್ರೆಸ್ ತಮಿಳುನಾಡಿನಲ್ಲಿ ಅಧಿಕಾರದ ಪಾಲು ಪಡೆಯಿತು.

ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಡಿಎಂಕೆ, ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದೊಂದಿಗೆ ಸಂಬಂಧ ಕಡಿದುಕೊಂಡಿತು. ಮೇ 7 ರಂದು ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೊಳಿ ಕರುಣಾನಿಧಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಕಾಂಗ್ರೆಸ್‌ನಿಂದ ಪ್ರತ್ಯೇಕವಾಗಿ ತಮ್ಮ ಸಂಸದರಿಗೆ ಆಸನ ವ್ಯವಸ್ಥೆ ಮಾಡುವಂತೆ ಕೋರಿದ್ದರು ಮತ್ತು ಆ ಮನವಿಗೆ ಈಗ ಸ್ಪೀಕರ್ ಒಪ್ಪಿಗೆ ನೀಡಿದ್ದಾರೆ.

ಶರದ್​ ಪವಾರ್​ ಒಪ್ಪಿದ್ದೇಗೆ?

ಮಹಾರಾಷ್ಟ್ರದ ರಾಜಕೀಯದಲ್ಲೂ ಬಿಜೆಪಿ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಎಂದು ವರದಿ ತಿಳಿಸಿದೆ. ಜನವರಿಯಲ್ಲಿ ಅಜಿತ್ ಪವಾರ್ ಅವರ ನಿಧನದ ಬಳಿಕ, ಅವರ ಪತ್ನಿ ಸುನೇತ್ರಾ ಪವಾರ್ ಎನ್‌ಸಿಪಿ ಮುಖ್ಯಸ್ಥರಾದರು. ಎರಡೂ ಎನ್‌ಸಿಪಿ ಬಣಗಳನ್ನು ವಿಲೀನಗೊಳಿಸಿ ಎನ್‌ಡಿಎ ಒಕ್ಕೂಟಕ್ಕೆ ತರಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಸುನೇತ್ರಾ ಪವಾರ್ ಮತ್ತು ಪುತ್ರ ಪಾರ್ಥ್ ಪವಾರ್ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಎನ್‌ಸಿಪಿ ಪ್ರತ್ಯೇಕ ಪಕ್ಷವಾಗಿ ಎನ್‌ಡಿಎ ಸೇರಲು ಅಭ್ಯಂತರವಿಲ್ಲ ಎಂದು ತಿಳಿಸಿದ್ದರು ಎನ್ನಲಾಗಿದೆ. ಇದರ ನಡುವೆಯೇ, ಜುಲೈನಲ್ಲಿ ನಡೆದ ಮುಂಗಾರು ಅಧಿವೇಶನದ ವೇಳೆ ಶರದ್ ಪವಾರ್ ಅವರು ತಮ್ಮ ಪಕ್ಷದ ಎಲ್ಲಾ 8 ಲೋಕಸಭಾ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಬರ ಪರಿಸ್ಥಿತಿಯ ಚರ್ಚೆ ಇದರ ಉದ್ದೇಶವಾಗಿದ್ದರೂ, ಮಸೂದೆಗೆ ಬೆಂಬಲ ಪಡೆಯುವ ತಂತ್ರವೂ ಇದರಲ್ಲಿತ್ತು. ನಂತರ 85 ವರ್ಷದ ಪವಾರ್ ಆಸ್ಪತ್ರೆಗೆ ದಾಖಲಾದಾಗ ಪ್ರಧಾನಿ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು ಮತ್ತು ನೀವು ಈಗ ವಿಶ್ರಾಂತಿ ಪಡೆಯಿರಿ, ನಾನು ಮತ್ತು ಸುಪ್ರಿಯಾ ಸುಳೆ ಸೇರಿ ದೇಶದ ವ್ಯವಹಾರಗಳನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು ಎನ್ನಲಾಗಿದೆ. ಇದು ಎನ್‌ಸಿಪಿ ಎನ್‌ಡಿಎ ಸೇರುವ ಮತ್ತು ಸುಪ್ರಿಯಾ ಸುಳೆ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿದೆ.

ಡಿಎಂಕೆ ಮತ್ತು ಶರದ್​ ಪವಾರ್ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರವು ಮುಂಗಾರು ಅಧಿವೇಶನದಲ್ಲಿ ತಾನು ಮಂಡಿಸಲು ಉದ್ದೇಶಿಸಿದ್ದ ಕೆಲವು ವಿವಾದಾತ್ಮಕ ಮಸೂದೆಗಳನ್ನು ತಡೆಹಿಡಿಯಿತು ಎಂದು ಮೂಲಗಳು ತಿಳಿಸಿವೆ. ಒಂದು ರಾಷ್ಟ್ರ, ಒಂದು ಚುನಾವಣೆ', ವಿಕಸಿತ ಭಾರತ್ ಶಿಕ್ಷಾ ಅಧಿಷ್ಠಾನ ಮಸೂದೆ, 30 ದಿನಗಳ ಕಾಲ ಜೈಲಿನಲ್ಲಿರುವ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಹಾಗೂ ಎನ್‌ಜಿಒಗಳ ಆರ್ಥಿಕ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (FCRA) ಕುರಿತ ಜಂಟಿ ಸಂಸದೀಯ ಸಮಿತಿಗಳ (JPC) ಅವಧಿಯನ್ನು ವಿಸ್ತರಿಸುವ ಮೂಲಕ ಸರ್ಕಾರ ಅವುಗಳನ್ನು ಸದ್ಯಕ್ಕೆ ಮುಂದೂಡಿತು. ಇದಕ್ಕೆ ಪ್ರತಿಯಾಗಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಕೋರಿತು.

ಅಂದು ರಾಹುಲ್​ ಗಾಂಧಿ ಮಾಡಿದ ಆ ಒಂದು ತಪ್ಪು....

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎಂಕೆಯ ಎರಡು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಲಿಖಿತವಾಗಿ ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ತಮಿಳುನಾಡು ಸೇರಿದಂತೆ ಎಲ್ಲಾ ರಾಜ್ಯಗಳ ಪ್ರಸ್ತುತ ಪ್ರಾತಿನಿಧ್ಯದ ಪಾಲನ್ನು ಉಳಿಸಿಕೊಂಡು, ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಶೇ. 50 ರಷ್ಟು ಹೆಚ್ಚಿಸುವುದು ಮತ್ತು ಈ ಹೊಸ ಸ್ಥಾನಗಳ ಸಂಖ್ಯೆಯನ್ನು ಮುಂದಿನ 25 ವರ್ಷಗಳ ಕಾಲ, ಅಂದರೆ 2051 ರವರೆಗೆ ಸ್ಥಿರವಾಗಿ ಇರಿಸುವ ನಿರ್ಧಾರವನ್ನು ಅಂಗೀಕರಿಸಲಾಗಿದೆ. ಈ ಬೇಡಿಕೆಗಳು ಈಡೇರಿದ ನಂತರ, ಶನಿವಾರ ಚೆನ್ನೈನಲ್ಲಿ ನಡೆದ ಸಂಸದರ ಸಭೆಯಲ್ಲಿ ಎಂ ಕೆ ಸ್ಟಾಲಿನ್ ಅವರು ಮುಂದಿನ 25 ವರ್ಷಗಳ ಕಾಲ ತಮಿಳುನಾಡಿನ ಸಂಸದೀಯ ಪ್ರಾತಿನಿಧ್ಯವನ್ನು ರಕ್ಷಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಘೋಷಿಸಿ ಮಸೂದೆಗೆ ಬೆಂಬಲ ಸೂಚಿಸಿದರು.

ಈ ಬೆಳವಣಿಗೆಯು ತಮಿಳುನಾಡು ಮತ್ತು ಮಹಾರಾಷ್ಟ್ರದ ರಾಜಕೀಯ ಸಮೀಕರಣಗಳನ್ನು ಬದಲಿಸಲಿದ್ದು, ವಿಜಯ್ ಪಕ್ಷದ ಉದಯವು ಬಿಜೆಪಿ, ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳನ್ನು ಪರೋಕ್ಷವಾಗಿ ಹತ್ತಿರ ತಂದಿದೆ. ಒಂದು ವೇಳೆ ಟಿವಿಕೆ ಜೊತೆ ಕಾಂಗ್ರೆಸ್​ ಜೈ ಜೋಡಿಸದೆ ಇದ್ದರೆ, ಇಂದು ಡಿಎಂಕೆ ಇಂಡಿಯಾ ಮೈತ್ರಿಕೂಟದಿಂದ ಹೊರ ಹೋಗುತ್ತಲೇ ಇರಲಿಲ್ಲ, ಹಾಗೆಯೇ ಕೇಂದ್ರ ಸರ್ಕಾರ ಕೂಡ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಮಂಡಿಸುವ ಸಾಹಸಕ್ಕೂ ಕೈ ಹಾಕುತ್ತಿರಲಿಲ್ಲ. ಅಂದು ವಿಜಯ್​ ಸರ್ಕಾರಕ್ಕೆ ಬೆಂಬಲ ನೀಡುವ ರಾಹುಲ್​ ಗಾಂಧಿ ಅವರ ನಿರ್ಧಾರ ಇಂದು ಕಾಂಗ್ರೆಸ್​ ನಾಯಕರಿಗೆ ಸಂಕಷ್ಟ ತಂದೊಡ್ಡಿದೆ ಅಂದರೆ ತಪ್ಪಾಗದು. ಮತ್ತೊಂದೆಡೆ, ಮಹಾರಾಷ್ಟ್ರದಲ್ಲಿ ಶರದ್​ ಬಣ ಎನ್‌ಡಿಎ ಸೇರಿದರೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಹೊಸ ಬದಲಾವಣೆಗಳಾಗಲಿದ್ದು, ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​).