UP Election 2027 | ಬಿಜೆಪಿಯ ಕೆಡ್ಡಾಗೆ ತಾವಾಗೇ ಬಿದ್ವಾ ವಿಪಕ್ಷಗಳು...?  
ದೇಶ

ಅಖಿಲೇಶ್ ಕೈಯಲ್ಲಿ ಹನುಮಾನ್ ಚಾಲೀಸಾ, ಕಾಂಗ್ರೆಸ್ ಬಾಯಲ್ಲಿ ಸನಾತನ ಜಪ!...ಬಿಜೆಪಿಯ ಕೆಡ್ಡಾಗೆ ತಾವಾಗೇ ಬಿದ್ವಾ ವಿಪಕ್ಷಗಳು...? | UP Election 2027

UP Election 2027: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ದರೂ ರಾಜಕೀಯ ವೇದಿಕೆ ಈಗಾಗಲೇ ಕಾವೇರಿದೆ. ಯುಪಿ ಅಧಿಕಾರದ ಗದ್ದುಗೆಯ ಹಾದಿ ಕೇವಲ ಸಾಂಪ್ರದಾಯಿಕ ಜಾತಿ ಸಮೀಕರಣಗಳು ಅಥವಾ ಅಭಿವೃದ್ಧಿಯ ಭರವಸೆಗಳ ಮೂಲಕ ಮಾತ್ರವೇ ಸಾಗುತ್ತಿಲ್ಲ. ಬದಲಿಗೆ, ಅಯೋಧ್ಯೆಯ ರಾಮಮಂದಿರ ಮತ್ತು ಸನಾತನ ಧರ್ಮದ ಸುತ್ತ ಹೆಣೆಯಲಾಗುತ್ತಿರುವ ಹೊಸ ರಾಜಕೀಯ ಭಾಷೆಯ ಮೂಲಕ ಹಾದುಹೋಗುತ್ತಿದೆ.
ಕಳೆದ ಕೆಲವು ದಶಕಗಳಿಂದ ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್, ಇಂದು ಅದೇ ಬಿಜೆಪಿಯನ್ನು ಸವಾಲಿಗೆ ಕರೆಯಲು ಬಿಜೆಪಿಯ ಮೂಲ ಅಸ್ತ್ರವಾದ ಸನಾತನ ಮತ್ತು ಧಾರ್ಮಿಕ ಸಂಕೇತಗಳ ಭಾಷೆಯನ್ನೇ ಬಳಸಬೇಕಾದ ಅನಿವಾರ್ಯತೆಗೆ ಸಿಲುಕಿವೆ.

ಬಿಜೆಪಿಯ ಭದ್ರಕೋಟೆ ಮತ್ತು ಧಾರ್ಮಿಕ ಅಸ್ತ್ರ

ಬಿಜೆಪಿಯು ಉತ್ತರ ಪ್ರದೇಶದಲ್ಲಿ ಹಿಂದುತ್ವವನ್ನು ಕೇವಲ ಧಾರ್ಮಿಕ ವಿಷಯವಾಗಿ ಬಳಸದೆ, ಅದನ್ನು ನವ ಭಾರತದ ಸಂಸ್ಕೃತಿಯ ಮರುಸ್ಥಾಪನೆ, ಅಭಿವೃದ್ಧಿ ಹಾಗೂ ಉತ್ತಮ ಆಡಳಿತದೊಂದಿಗೆ ಯಶಸ್ವಿಯಾಗಿ ಬೆಸೆದುಕೊಂಡು ಬಂದಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್‌ ಅಭಿವೃದ್ಧಿ ಹಾಗೂ ಯೋಗಿ ಆದಿತ್ಯನಾಥ್ ಅವರ ಖಡಕ್ ಹಿಂದುತ್ವದ ಆಡಳಿತ ಶೈಲಿಯು ಬಿಜೆಪಿಗೆ ರಾಜ್ಯದಲ್ಲಿ ಅತ್ಯಂತ ಭದ್ರವಾದ ಮತಬ್ಯಾಂಕ್ ತಳಹದಿಯನ್ನು ಹಾಕಿಕೊಟ್ಟಿದೆ. ಈ ಮೂಲಕ ಸಾರ್ವಜನಿಕ ಚರ್ಚೆಯ ವಿಷಯವನ್ನೇ ತನ್ನ ಪರವಾಗಿ ತಿರುಗಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರದ ಚಂದಾ ದುರುಪಯೋಗ ಹಾಗೂ ಹಣಕಾಸಿನ ಅಕ್ರಮದ ಆರೋಪಗಳು ಹೊರಬೀಳುತ್ತಿದ್ದಂತೆ, ಪ್ರತಿಪಕ್ಷಗಳಿಗೆ ಬಿಜೆಪಿಯ ಆಡಳಿತಾತ್ಮಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಪ್ರಶ್ನಿಸಲು ದೊಡ್ಡ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ. ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ಈ ವಿಷಯವನ್ನು ಧರ್ಮದ ಮೇಲಿನ ದಾಳಿ ಎಂದು ಕರೆಯುವ ಬದಲು, ರಾಮಭಕ್ತರು ನೀಡಿದ ಕಾಣಿಕೆಯ ಪಾರದರ್ಶಕತೆ ಮತ್ತು ಜವಾಬ್ದಾರಿಯ ಪ್ರಶ್ನೆಯನ್ನಾಗಿ ಬಿಂಬಿಸಿ ಬಿಜೆಪಿಯನ್ನು ರಕ್ಷಣಾತ್ಮಕ ಸ್ಥಿತಿಗೆ ತಳ್ಳಲು ಪ್ರಯತ್ನಿಸುತ್ತಿವೆ.

ಸಮಾಜವಾದಿ ಪಾರ್ಟಿಯ ಮೃದು ಹಿಂದುತ್ವ

ದಶಕಗಳ ಕಾಲ ಮುಸ್ಲಿಂ-ಯಾದವ್ ಸಮೀಕರಣವನ್ನೇ ನೆಚ್ಚಿಕೊಂಡು ರಾಜಕೀಯ ಮಾಡುತ್ತಿದ್ದ ಅಖಿಲೇಶ್ ಯಾದವ್, ಈಗ ತಮ್ಮ ಸಮಾಜವಾದಿ ಪಾರ್ಟಿಗೆ ಸ್ಪಷ್ಟವಾದ ಮೃದು ಹಿಂದುತ್ವದ ಸ್ಪರ್ಶ ನೀಡಲು ಮುಂದಾಗಿದ್ದಾರೆ. ತಾವು ರೂಪಿಸಿಕೊಂಡಿರುವ ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಒಕ್ಕೂಟದ ಜತೆಗೆ ಬಹುಸಂಖ್ಯಾತ ಹಿಂದೂ ಮತಬ್ಯಾಂಕ್ ದೂರವಾಗಬಾರದು ಎಂಬುದು ಅವರ ಲೆಕ್ಕಾಚಾರವಾಗಿದೆ.
ಹನುಮಾನ್ ಚಾಲೀಸ ಪಠಣ ಮತ್ತು ಜ್ಯೋತಿಷ್ಯದ ಬಗ್ಗೆ ಬಹಿರಂಗವಾಗಿ ಮಾತನಾಡುವುದು.
ಇಟಾವಾದಲ್ಲಿ ಹಿಮಾಲಯದ ಕೇದಾರನಾಥ ಮಾದರಿಯ 'ಕೇದಾರೇಶ್ವರ ಮಹಾದೇವ' ದೇವಾಲಯದ ನಿರ್ಮಾಣ.
'ಸಮಾಜವಾದಿ ಪಿಡಿಎ ರಥಯಾತ್ರೆ'ಯ ಮೂಲಕ ಚಂದಾ ಕಳವು ವಿವಾದವನ್ನು ಮನೆಮನೆಗೆ ತಲುಪಿಸುವ ಯೋಜನೆ.

ಕಾಂಗ್ರೆಸ್‌ನ ಮೂಲ ಸನಾತನಿ ಪ್ರತಿಪಾದನೆ

ಇತ್ತ ಕಾಂಗ್ರೆಸ್ ಕೂಡ ಈ ಧಾರ್ಮಿಕ ರಾಜಕೀಯದ ಓಟದಲ್ಲಿ ಹಿಂದೆ ಬಿದ್ದಿಲ್ಲ. ಧಾರ್ಮಿಕ ವಿಷಯಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಕಾಂಗ್ರೆಸ್, ಈಗ ತನ್ನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ನಾವು ಬರೀ ಪ್ರದರ್ಶನಕ್ಕಾಗಿ ಸನಾತನಿಗಳಾದವರಲ್ಲ, ನಾವು ಪವಿತ್ರ ಕಾಶಿಯ ಮೂಲ ಸನಾತನಿಗಳು ಎಂದು ಮುಕ್ತವಾಗಿ ಪ್ರತಿಪಾದಿಸುತ್ತಿದ್ದಾರೆ. ರಾಮಮಂದಿರದ ಚಂದಾ ಕಳವು ವಿವಾದವನ್ನು ಭಕ್ತರ ನಂಬಿಕೆಗೆ ಎಸಗಿದ ಮೋಸ ಎಂದು ಸ್ಪಷ್ಟಪಡಿಸುವ ಮೂಲಕ, ತಾವೂ ಸನಾತನ ಧರ್ಮದ ರಕ್ಷಕರು ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ.

ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು!..

ಪ್ರತಿಪಕ್ಷಗಳ ಈ ದಾಳಿಯನ್ನು ಎದುರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೂತಕಾಲದ ಘಟನೆಗಳನ್ನು ನೆನಪಿಸುವ ಪ್ರತ್ಯಸ್ತ್ರವನ್ನು ಬಳಸುತ್ತಿದ್ದಾರೆ. ಹಿಂದೆ ಕನ್ವರ್ ಯಾತ್ರೆ, ದುರ್ಗಾಪೂಜೆ ಹಾಗೂ ರಾಮನವಮಿ ಮೆರವಣಿಗೆಗಳನ್ನು ನಿಷೇಧಿಸಿದ್ದವರು ಮತ್ತು ಅಯೋಧ್ಯೆಯಲ್ಲಿ ರಾಮಭಕ್ತರ (ಕರಸೇವಕರ) ಮೇಲೆ ಗುಂಡು ಹಾರಿಸಲು ಆದೇಶಿಸಿದವರೇ ಇಂದು ಧರ್ಮದ ಬಗ್ಗೆ ಮಾತನಾಡುತ್ತಿರುವುದು ಬೂಟಾಟಿಕೆ ಎಂದು ಯೋಗಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಚಂದಾ ಕಳವು ಆರೋಪ ಕೇಳಿಬಂದ ತಕ್ಷಣ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿ, ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಜರುಗಿಸಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಉತ್ತರ ಪ್ರದೇಶದ ರಾಜಕೀಯದಲ್ಲಿ ಪ್ರತಿಯೊಂದು ಪ್ರಮುಖ ಪಕ್ಷವೂ ರಾಮ, ದೇವಾಲಯ, ರಥಯಾತ್ರೆ ಮತ್ತು ಸನಾತನ ಎಂಬ ಪದಗಳ ಸುತ್ತಲೇ ತಮ್ಮ ರಾಜಕೀಯ ಭಾಷೆಯನ್ನು ರೂಪಿಸಿಕೊಳ್ಳುತ್ತಿವೆ. ಪ್ರತಿಪಕ್ಷಗಳು ಚಂದಾ ದುರುಪಯೋಗದ ವಿಷಯದಲ್ಲಿ ಬಿಜೆಪಿಯನ್ನು ಪ್ರಶ್ನಿಸುತ್ತಿದ್ದರೂ, ಚುನಾವಣೆ ನಡೆಯಬೇಕಾದ ವೇದಿಕೆ ಮತ್ತು ವಿಚಾರವನ್ನು ನಿರ್ಧರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ವಿರೋಧ ಪಕ್ಷಗಳು ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ, ಬಿಜೆಪಿ ಹೆಣೆದ ಹಿಂದುತ್ವದ ಅಂಗಳದಲ್ಲೇ ಇಳಿದು ಆಟವಾಡಬೇಕಾದ ವಾತಾವರಣ ಸೃಷ್ಟಿಯಾಗಿದೆ. 2027ರ ಚುನಾವಣೆಯಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಜಾತೀಯ ಸಮೀಕರಣಗಳ ಮೇಲೆ ನಿರ್ಧಾರವಾಗಬಹುದು, ಆದರೆ ಸದ್ಯದ ಮಟ್ಟಿಗೆ ರಾಜಕೀಯದ ಅಜೆಂಡಾ ನಿರ್ಧರಿಸುವಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ ಅಂತಲೇ ಹೇಳಬಹುದು(ಏಜೆನ್ಸೀಸ್​).