Pawanraje Nimbalkar Murder Case | 20 ವರ್ಷಗಳ ಹಿಂದಿನ ರಕ್ತಚರಿತ್ರೆ!...ಉದ್ಧವ್ ಬಣದ ಸಂಸದರ ಬಂಡಾಯಕ್ಕೆ ಇದೇನಾ ಅಸಲಿ ಕಾರಣ..? 
ದೇಶ

20 ವರ್ಷಗಳ ಹಿಂದಿನ ರಕ್ತಚರಿತ್ರೆ!...ಉದ್ಧವ್ ಬಣದ ಸಂಸದರ ಬಂಡಾಯಕ್ಕೆ ಇದೇನಾ ಅಸಲಿ ಕಾರಣ..? ಇಲ್ಲಿದೆ ಹತ್ಯೆಯ ಕಂಪ್ಲೀಟ್ ಡಿಟೇಲ್ಸ್ | Pawanraje Nimbalkar Murder Case

Pawanraje Nimbalkar Murder Case: ಶಿವಸೇನೆ ಉದ್ಧವ್ ಠಾಕ್ರೆ ಬಣದ ಆರು ಸಂಸದರ ಬಂಡಾಯದ ನಡುವೆ, ಧಾರಾಶಿವ್ ಸಂಸದ ಓಮ್ರಾಜೆ ನಿಂಬಾಳ್ಕರ್ ಹೆಸರು ಭಾರಿ ಸದ್ದು ಮಾಡುತ್ತಿದೆ. 20 ವರ್ಷ ಹಳೆಯದಾದ ತಂದೆಯ ಕೊಲೆ ಪ್ರಕರಣದಲ್ಲಿ ತಮಗೆ ಪೂರಕವಾದ ತೀರ್ಪು ಬರುವ ಭರವಸೆ ಸಿಕ್ಕಿದ್ದಕ್ಕೇ ಓಮ್ರಾಜೆ ಪಕ್ಷಾಂತರಕ್ಕೆ ಮುಂದಾಗಿದ್ದಾರೆ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೊಸ ಬಾಂಬ್ ಸಿಡಿಸಿದ್ದಾರೆ.
ಓಮ್ರಾಜೆ ನಿಂಬಾಳ್ಕರ್ ಅವರ ತಂದೆ ಪವನ್ ರಾಜೆ ನಿಂಬಾಳ್ಕರ್ ಅವರು ಉಸ್ಮಾನಾಬಾದ್ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದರು ಮತ್ತು ಎನ್‌ಸಿಪಿ ಹಿರಿಯ (NCP) ನಾಯಕ ಪದ್ಮಸಿಂಹ ಪಾಟೀಲ್ ಅವರ ರಾಜಕೀಯ ಪ್ರಾಬಲ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದರು.
2006 ಜೂನ್ 3 ರಂದು ಪವನ್ ರಾಜೆ ನಿಂಬಾಳ್ಕರ್ ಮತ್ತು ಅವರ ಚಾಲಕ ಸಮದ್ ಕಾಜಿ, ಸ್ಕೋಡಾ ಕಾರಿನಲ್ಲಿ ನವಿ ಮುಂಬೈನ ಕಲಂಬೋಲಿ ಬಳಿ ಪ್ರಯಾಣಿಸುತ್ತಿದ್ದಾಗ, ಮತ್ತೊಂದು ವಾಹನದಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಕಾರು ನಿಲ್ಲುತ್ತಿದ್ದಂತೆ ಹಂತಕರು ಮನಸೋಇಚ್ಛೆ ಗುಂಡಿನ ಸುರಿಮಳೆಗರೆದಿದ್ದು, ಪವನ್ ರಾಜೆ ಮತ್ತು ಚಾಲಕ ಕಾಜಿ ಇಬ್ಬರೂ ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು. ಈ ಘೋರ ಹತ್ಯೆ ಮಹಾರಾಷ್ಟ್ರದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿತ್ತಲ್ಲದೆ, ಇದು ರಾಜಕೀಯ ಪ್ರೇರಿತ ಕೊಲೆ ಎಂಬ ಆರೋಪಗಳಿಗೆ ದಾರಿ ಮಾಡಿಕೊಟ್ಟಿತ್ತು.
ವಿಚಾರಣೆಯ ಸಂದರ್ಭದಲ್ಲಿ ದಾಖಲಾದ ಸಾಕ್ಷ್ಯಗಳ ಪ್ರಕಾರ, ಪವನ್ ರಾಜೆ ನಿಂಬಾಳ್ಕರ್ ಅವರು ಆರಂಭದಲ್ಲಿ ಇದೇ ಪದ್ಮಸಿಂಹ ಪಾಟೀಲ್ ಅವರ ಬೆಂಬಲದೊಂದಿಗೆ ರಾಜಕೀಯವಾಗಿ ಬೆಳೆದಿದ್ದರು. ತೇರ್ನಾ ಸಕ್ಕರೆ ಕಾರ್ಖಾನೆ ಮತ್ತು ಉಸ್ಮಾನಾಬಾದ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಂತಹ ಸಹಕಾರಿ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನೂ ಅಲಂಕರಿಸಿದ್ದರು. ಆದರೆ, ನಿಂಬಾಳ್ಕರ್ ಅವರ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದಂತೆ, ಇಬ್ಬರು ನಾಯಕರ ನಡುವಿನ ಸಂಬಂಧ ಹದಗೆಡುತ್ತಾ ಹೋಯಿತು. ಉಭಯ ಬಣಗಳ ನಡುವಿನ ವೈಷಮ್ಯ ತಾರಕಕ್ಕೇರಿದಾಗ, ತಮ್ಮ ತಂದೆ ಪಾಟೀಲ್ ವಿರುದ್ಧ ಪೊಲೀಸ್ ದೂರುಗಳನ್ನು ಸಹ ದಾಖಲಿಸಿದ್ದರು ಎಂದು ಓಮ್ರಾಜೆ ನಿಂಬಾಳ್ಕರ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಆರಂಭಿಕ ತನಿಖೆಯ ಬಗ್ಗೆ ನಿಂಬಾಳ್ಕರ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದ ನಂತರ, ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವಹಿಸಲಾಯಿತು. 2009 ರಲ್ಲಿ ಸಿಬಿಐ ದೋಷಾರೋಪ ಪಟ್ಟಿ ಸಿದ್ಧಪಡಿಸಿ, ಮಹಾರಾಷ್ಟ್ರದ ಮಾಜಿ ಗೃಹ ಸಚಿವರೂ ಆಗಿದ್ದ ಪದ್ಮಸಿಂಹ ಪಾಟೀಲ್ ಅವರನ್ನು ಈ ಕೊಲೆಯ ಮುಖ್ಯ ಆರೋಪಿ ಮತ್ತು ಸಂಚುಗಾರ ಎಂದು ಹೆಸರಿಸಿತು. ಸಿಬಿಐ ಪ್ರಕಾರ, ಈ ಕೊಲೆಯ ಹಿಂದಿನ ಮುಖ್ಯ ಪಿತೂರಿಗೆ ರಾಜಕೀಯ ವೈಷಮ್ಯವೇ ಕಾರಣ. ಉಸ್ಮಾನಾಬಾದ್ ಜಿಲ್ಲೆಯಲ್ಲಿ ನಿಂಬಾಳ್ಕರ್ ಅವರ ಹೆಚ್ಚುತ್ತಿರುವ ಜನಪ್ರಿಯತೆ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂದು ಪಾಟೀಲ್ ಭಾವಿಸಿದ್ದರು ಮತ್ತು ಅವರನ್ನು ಮುಗಿಸಲು 30 ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ಆದರೆ ಪದ್ಮಸಿಂಹ ಪಾಟೀಲ್ ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದರು,
ಈ ಪ್ರಕರಣದಲ್ಲಿ ಉದ್ಯಮಿ ಸತೀಶ್ ಮಂದಾಡೆ, ಮಾಜಿ ಕಾರ್ಪೊರೇಟರ್ ಮೋಹನ್ ಶುಕ್ಲಾ, ಪರಸ್ಮಲ್ ಜೈನ್, ಮಾಜಿ ಅಬಕಾರಿ ಇನ್ಸ್‌ಪೆಕ್ಟರ್ ಶಶಿಕಾಂತ್ ಕುಲಕರ್ಣಿ, ಬಿಎಸ್‌ಪಿ ಕಾರ್ಯಕರ್ತ ಕೈಲಾಶ್ ಯಾದವ್ ಮತ್ತು ಶೂಟರ್‌ಗಳಾದ ದಿನೇಶ್ ತಿವಾರಿ, ಪಿಂಟು ಸಿಂಗ್ ಹಾಗೂ ಛೋಟೆ ಪಾಂಡೆ ಅವರನ್ನು ಇತರ ಆರೋಪಿಗಳೆಂದು ಹೆಸರಿಸಲಾಗಿತ್ತು. ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ವಿಚಾರಣೆ ನಡೆದಿರುವ ಈ ಪ್ರಕರಣದ ತೀರ್ಪನ್ನು ವಿಶೇಷ ಸಿಬಿಐ ನ್ಯಾಯಾಲಯವು ಮಂಗಳವಾರ ನೀಡಬೇಕಿತ್ತು, ಆದರೆ ಅದನ್ನು ಈಗ ಶನಿವಾರಕ್ಕೆ ಮುಂದೂಡಲಾಗಿದೆ. ಆರೋಪಿಗಳು ಮತ್ತು ಸಂತ್ರಸ್ತರು ಪ್ರಭಾವಿ ರಾಜಕೀಯ ಹಿನ್ನೆಲೆಯುಳ್ಳವರಾಗಿರುವುದರಿಂದ, ಈ ತೀರ್ಪು ಮಹಾರಾಷ್ಟ್ರ ರಾಜಕಾರಣದ ಮೇಲೆ ಭಾರಿ ಪರಿಣಾಮ ಬೀರುವ ನಿರೀಕ್ಷೆಯಿದೆ(ಏಜೆನ್ಸೀಸ್​​).