CM Vijay | ಮುಖ್ಯಮಂತ್ರಿ ಜೋಸೆಫ್ ವಿಜಯ್
CM Vijay: ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬೆನ್ನಲ್ಲೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸರ್ಕಾರಕ್ಕೆ ಜನಾದೇಶವಿಲ್ಲ ಎಂಬ ಡಿಎಂಕೆ ವಾದದ ವಿರುದ್ಧ ಅಂಕಿಅಂಶಗಳ ಸಮೇತ ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ್, ಡಿಎಂಕೆ ಪಕ್ಷವನ್ನು ದುರಹಂಕಾರಿ ಎಂದು ಕರೆಯುವ ಮೂಲಕ ರಾಜಕೀಯ ಸಮರಕ್ಕೆ ಹೊಸ ತಿರುವು ನೀಡಿದ್ದಾರೆ.
ವಿಜಯ್ ತಮ್ಮ ಪೋಸ್ಟ್ನಲ್ಲಿ, ಗೌರವಾನ್ವಿತ ವಿರೋಧ ಪಕ್ಷದ ನಾಯಕರು ತಮ್ಮ ಎಂದಿನ ಶೈಲಿಯಲ್ಲಿ ತಮಿಳುನಾಡಿನ ಬಹುಪಾಲು ಜನರ ಬೆಂಬಲ ನಮಗಿಲ್ಲ ಎಂಬ ಹಳೆಯ ಮತ್ತು ಹಳಸಿದ ವಾದವನ್ನು ಎತ್ತಿಕೊಂಡಿದ್ದಾರೆ. ಇಡೀ ರಾಷ್ಟ್ರಕ್ಕೆ ತಿಳಿದಿರುವಂತೆ, 2006 ರಲ್ಲಿ ಎಲ್ಲಾ 234 ಸ್ಥಾನಗಳನ್ನು 100 ಪ್ರತಿಶತ ಮತಗಳೊಂದಿಗೆ ಗೆದ್ದು ಬಹುಮತ ಪಡೆದವರಂತೆ ವರ್ತಿಸುತ್ತಿರುವ ಡಿಎಂಕೆ ಸರ್ಕಾರವನ್ನು ನೆನೆದು ತಮಿಳುನಾಡಿನ ಜನರು ಉನ್ಮಾದದಿಂದ ನಗುತ್ತಿರಬೇಕು ಎಂದು ವಿಜಯ್ ಲೇವಡಿ ಮಾಡಿದ್ದಾರೆ.
ಎಲ್ಲವನ್ನೂ ತಿಳಿದಿರುವ ದುರಹಂಕಾರಿ ಡಿಎಂಕೆ ಎಂದಿಗೂ ವಾಸ್ತವವನ್ನು ಅರ್ಥಮಾಡಿಕೊಳ್ಳುವುದಿಲ್ಲ, ಆದ್ದರಿಂದ ಜನರಿಗೆ ಸತ್ಯ ತಿಳಿಸಲು ಮತಗಳ ಅಂಕಿಅಂಶಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಅವರು ಗುಡುಗಿದ್ದಾರೆ. ವಿಜಯ್ ನೀಡಿರುವ ಲೆಕ್ಕಾಚಾರದ ಪ್ರಕಾರ, ಟಿವಿಕೆ ಪಕ್ಷದ ಮತ ಹಂಚಿಕೆ ಡಿಎಂಕೆಯ ವೈಯಕ್ತಿಕ ಮತ ಹಂಚಿಕೆಗಿಂತ ಹೆಚ್ಚಾಗಿದ್ದು, ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಿದ ಟಿವಿಕೆ ಶೇಕಡಾ 34.92 ರಷ್ಟು (ಸುಮಾರು ಶೇ. 35) ಮತಗಳನ್ನು ಪಡೆದುಕೊಂಡಿದೆ. ಇದಕ್ಕೆ ವಿರುದ್ಧವಾಗಿ, ಮೈತ್ರಿ ಪಕ್ಷಗಳ ನೆರವಿನಿಂದ ಸ್ಪರ್ಧಿಸಿದ್ದ ಡಿಎಂಕೆಯ ಮತ ಹಂಚಿಕೆ ಕೇವಲ ಶೇಕಡಾ 24.19 ರಷ್ಟಿದೆ. ಅಂದರೆ ಡಿಎಂಕೆಗಿಂತ ಟಿವಿಕೆ ಶೇಕಡಾ 10 ಕ್ಕಿಂತಲೂ ಹೆಚ್ಚು ಮತಗಳನ್ನು ಏಕಾಂಗಿಯಾಗಿ ಗಳಿಸಿದೆ.
ಒಟ್ಟು ಮತಗಳ ಸಂಖ್ಯೆಯನ್ನು ಗಮನಿಸಿದರೆ, ಡಿಎಂಕೆ ಪ್ರತ್ಯೇಕ ಪಕ್ಷವಾಗಿ ಒಂದು ಕೋಟಿ 19 ಲಕ್ಷದ 29 ಸಾವಿರದ 144 ಮತಗಳನ್ನು ಪಡೆದಿದ್ದರೆ, ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಒಂದು ಕೋಟಿ 72 ಲಕ್ಷದ 26 ಸಾವಿರದ 209 ಮತಗಳನ್ನು ಪಡೆದಿದೆ. ಈ ಮೂಲಕ ತಾವು ಡಿಎಂಕೆಗಿಂತ ಸುಮಾರು 52 ಲಕ್ಷದ 97 ಸಾವಿರದ 65 ಮತಗಳನ್ನು ಹೆಚ್ಚು ಪಡೆದಿದ್ದೇವೆ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ. ಸುಮಾರು ಅರ್ಧ ಕೋಟಿಗೂ ಹೆಚ್ಚು ಜನರು ಡಿಎಂಕೆಯ ಬದಲು ಟಿವಿಕೆಯನ್ನು ಬೆಂಬಲಿಸಿದ್ದಾರೆ ಎಂಬ ಈ ಅಂಕಿಅಂಶವು ಡಿಎಂಕೆಯ ವಾದವನ್ನು ಬುಡಮೇಲು ಮಾಡಿದೆ.
ವಿಧಾನಸಭೆಯಲ್ಲಿ ವಿಜಯ್ ಕೆಲ ಸಣ್ಣ ಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಇಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳನ್ನು ಪಡೆದು ಬಹುಮತ ಸಾಬೀತುಪಡಿಸಿದ್ದರು. ಆದರೆ, ಟಿವಿಕೆ ಏಕಾಂಗಿಯಾಗಿ 118ರ ಗಡಿ ದಾಟದ ಕಾರಣ ವಿಜಯ್ ಸರ್ಕಾರಕ್ಕೆ ನೈತಿಕ ಹಕ್ಕಿಲ್ಲ ಎಂದು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ವಾದಿಸಿದ್ದರು. ಇದಕ್ಕೆ ಉತ್ತರವಾಗಿ ವಿಜಯ್ ಡಿಎಂಕೆಯ ವೈಯಕ್ತಿಕ ಶಕ್ತಿಗಿಂತ ತಮ್ಮ ಪಕ್ಷದ ಶಕ್ತಿ ಹೆಚ್ಚಿದೆ ಎಂದು ಸಾಬೀತುಪಡಿಸಲು ಈ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ(ಏಜೆನ್ಸೀಸ್).