Dental Treatment 
ದೇಶ

Dental Treatment: ಡಾಕ್ಟ್ರೇ ಇದೆಂಥಾ ಅನ್ಯಾಯ? ನೋವಿರೋ ಹಲ್ಲು ಬಿಟ್ಟು, ಚೆನ್ನಾಗಿದ್ದ ಹಲ್ಲೇ ಕಿತ್ತ ಆಸ್ಪತ್ರೆ ಸಿಬ್ಬಂದಿ!

ಅಜ್ಮೀರ್: ‘ನನ್ನ ಅನ್ಯಾಯವಾಗಿದೆ... ನೋವಿರೋ ಹಲ್ಲು ಬಿಟ್ಟು, ಚೆನ್ನಾಗಿದ್ದ ಹಲ್ಲನ್ನೇ ಕಿತ್ತು ಹಾಕಿದ್ದಾರೆ!’ - ಹೀಗೆಂದು(Dental Treatment) ಮಹಿಳೆಯೊಬ್ಬರು ಆಸ್ಪತ್ರೆಯ ಆವರಣದಲ್ಲೇ ಕಣ್ಣೀರು ಹಾಕುತ್ತಾ ಆಕ್ರೋಶ ಹೊರಹಾಕಿದ ಘಟನೆ ರಾಜಸ್ಥಾನದ ಅಜ್ಮೀರ್‌ನ ಪ್ರಸಿದ್ಧ ಜವಾಹರಲಾಲ್ ನೆಹರು (JLN) ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ಬೇಜವಾಬ್ದಾರಿತನದಿಂದಾಗಿ ನೊಂದ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಆಸ್ಪತ್ರೆಯಲ್ಲೇ ಪ್ರತಿಭಟನೆ ನಡೆಸಿದ್ದು, ದಂತ ವಿಭಾಗದಲ್ಲಿ ಕೆಲಕಾಲ ತೀವ್ರ ಗದ್ದಲ ಹಾಗೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದರು

ಅಜ್ಮೀರ್‌ನ ನಾಗಫಣಿ ನಯಿ ಸಡಕ್ ನಿವಾಸಿಯಾದ ಶಬಾನಾ ಖಾನ್ ಎಂಬ ಮಹಿಳೆ ಕಳೆದ ಎರಡು ತಿಂಗಳಿಂದ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಇತ್ತೀಚೆಗೆ ಜಿಎಲ್‌ಎನ್ ಆಸ್ಪತ್ರೆಯ ದಂತ ವೈದ್ಯರನ್ನು ಸಂಪರ್ಕಿಸಿದ್ದರು. ಮಹಿಳೆಯನ್ನು ಪರೀಕ್ಷಿಸಿದ್ದ ವೈದ್ಯರು, ಆಕೆಯ ಒಂದು ಹಲ್ಲು ಸಂಪೂರ್ಣವಾಗಿ ಕೊಳೆತು ಹಾನಿಗೊಳಗಾಗಿದೆ, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಬೇಕಾಗುತ್ತದೆ ಎಂದು ಸಲಹೆ ನೀಡಿದ್ದರು.
ವೈದ್ಯರ ಸೂಚನೆಯಂತೆ ಶಬಾನಾ ಅವರು ಶುಕ್ರವಾರ ತಮ್ಮ ಪತಿಯೊಂದಿಗೆ ಹಲ್ಲು ತೆಗೆಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ಚಿಕಿತ್ಸೆ ನೀಡಿದ ಮಹಿಳಾ ವೈದ್ಯರು ತೀವ್ರ ನಿರ್ಲಕ್ಷ್ಯ ವಹಿಸಿ, ನೋವಿನಿಂದ ಕೂಡಿದ್ದ ಕೊಳೆತ ಹಲ್ಲನ್ನು ಹಾಗೇ ಬಿಟ್ಟು, ಅದರ ಪಕ್ಕದಲ್ಲೇ ಇದ್ದ ಸಂಪೂರ್ಣ ಆರೋಗ್ಯಕರವಾಗಿದ್ದ ಮತ್ತೊಂದು ಹಲ್ಲನ್ನು ಕಿತ್ತು ಹಾಕಿದ್ದಾರೆ ಎಂದು ರೋಗಿ ಗಂಭೀರ ಆರೋಪ ಮಾಡಿದ್ದಾರೆ.

ಮಾತುಕತೆಯಲ್ಲಿ ಬ್ಯುಸಿಯಾಗಿದ್ದ ವೈದ್ಯರು!

"ಚಿಕಿತ್ಸೆ ನೀಡುವ ಸಮಯದಲ್ಲಿ ಮಹಿಳಾ ವೈದ್ಯರು ತಮ್ಮ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಹರಟೆ ಹೊಡೆಯುವುದರಲ್ಲಿ ನಿರತರಾಗಿದ್ದರು. ಅವರ ಗಮನ ಬೇರೆಡೆ ಇದ್ದಿದ್ದರಿಂದ ಈ ಎಡವಟ್ಟು ನಡೆದಿದೆ. ಶಸ್ತ್ರಚಿಕಿತ್ಸೆ ಮಾಡುವಾಗ ನನಗೆ ಅಸಹನೀಯ ನೋವು ಉಂಟಾಗಿತ್ತು. ಕೀಳುತ್ತಿರುವ ಹಲ್ಲು ನೋವಿರುವುದಲ್ಲ, ಬೇರೆ ಹಲ್ಲು ಎಂದು ನಾನು ಕಿರುಚಾಡಿ, ಪದೇ ಪದೇ ಹೇಳಿದರೂ ವೈದ್ಯರು ನನ್ನ ಮಾತನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ" ಎಂದು ಶಬಾನಾ ಖಾನ್ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಲಿಖಿತ ದೂರು, ತನಿಖೆಗೆ ಆದೇಶ!

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೋಗಿ, ಆಸ್ಪತ್ರೆಯ ಮುಖ್ಯ ಅಧೀಕ್ಷಕರಾದ ಡಾ. ಅರವಿಂದ್ ಖರೆ ಅವರಿಗೆ ಲಿಖಿತ ದೂರನ್ನು ಸಲ್ಲಿಸಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ಅಮಿತ್ ಯಾದವ್ ಅವರು, "ಮಹಿಳಾ ವೈದ್ಯರ ವಿರುದ್ಧ ನಿರ್ಲಕ್ಷ್ಯ ಮತ್ತು ತಪ್ಪು ಹಲ್ಲು ಹೊರತೆಗೆದ ಆರೋಪದ ಮೇಲೆ ರೋಗಿಯಿಂದ ದೂರು ದಾಖಲಾಗಿರುವುದು ನಿಜ. ಈ ಕುರಿತು ಆಸ್ಪತ್ರೆಯ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಿ, ನಿಯಮಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್​).