ಹೈದರಾಬಾದ್‌ನಲ್ಲಿ 7 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು
- ಹೈದರಾಬಾದ್‌ನಲ್ಲಿ ನಿರ್ಮಾಣ ಹಂತದ 7 ಅಂತಸ್ತಿನ ಕಟ್ಟಡ ಕುಸಿತ
- ದುರಂತದಲ್ಲಿ ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ
- ಪರ್ಮಿಷನ್ ಇಲ್ಲದೆ ಕಾಮಗಾರಿ ಆರಂಭವಾಗಿತ್ತು ಎಂದ ‘ಕೈ’ ಶಾಸಕ
ಹೈದರಾಬಾದ್ : ನಿರ್ಮಾಣ ಹಂತದಲ್ಲಿದ್ದ ಏಳು ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ.
ಈ ಘಟನೆ ಹೈದರಾಬಾದ್‌ನ ಮಾಧಾಪುರದ ಅಂಜಯ್ಯ ನಗರದಲ್ಲಿ ನಡೆದಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಿರ್ಮಾಣ ಹಂತದಲ್ಲಿದ್ದ ಏಳು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದಿದೆ. ಘಟನೆಯಲ್ಲಿ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನುಮತಿ ಪಡೆದಿರಲಿಲ್ಲ ಎಂದು ‘ಕೈ’ ಶಾಸಕರ
ಈ ನಡುವೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುಮತಿಗಳು ಇರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಅರೆಕಪೂಡಿ ಗಾಂಧಿ ಆರೋಪಿಸಿದ್ದಾರೆ. ಅವರ ಪ್ರಕಾರ, ಮಾಧಾಪುರ ವಿಭಾಗದಲ್ಲಿದ್ದ ಈ ನಿರ್ಮಾಣ ಹಂತದ ಕಟ್ಟಡದ ಕಾಮಗಾರಿಯನ್ನು ಅಧಿಕಾರಿಗಳು ಸುಮಾರು ನಾಲ್ಕು ತಿಂಗಳ ಹಿಂದೆ ನಿಲ್ಲಿಸಿದ್ದರು. ಆದರೆ ಇತ್ತೀಚೆಗೆ ಮತ್ತೆ ಪರ್ಮಿಷನ್ ಇಲ್ಲದೆ ಕಾಮಗಾರಿ ಶುರುವಾಗಿತ್ತು ಎಂದು ಅವರು ಕಿಡಿಕಾರಿದ್ದಾರೆ.
ಪಕ್ಕದ ಕಟ್ಟಡಕ್ಕೂ ಕಾಮಗಾರಿ ವಿಸ್ತರಣೆ?
ಅವರು ಮುಂದಿವರಿದು, ಏಳು ಅಂತಸ್ತಿನ ಕಟ್ಟಡಕ್ಕೆ ಹೊಂದಿಕೊಂಡಿದ್ದ ಪಕ್ಕದ ಕಟ್ಟಡದ ಕಡೆಗೂ ನೆಲಮಾಳಿಗೆ ಕಾಮಗಾರಿ ವಿಸ್ತರಿಸಲಾಗುತ್ತಿತ್ತು. ಇದರಿಂದ ಕಟ್ಟಡದ ಸ್ಟ್ರಕ್ಚರ್‌ಗೆ ತೊಂದರೆಯಾಗಿ ಏಕಾಏಕಿ ಕುಸಿದಿರಬಹುದು ಎಂದು ಶಾಸಕ ಗಾಂಧಿ ಆರೋಪಿಸಿದ್ದಾರೆ. ಅಕ್ರಮವಾಗಿ ಕಟ್ಟಡ ನಿರ್ಮಾಣದಿಂದ ದೊಡ್ಡ ಅಪಾಯಗಳು ಎದುರಾಗಬಹುದು. ಹೀಗಾಗಿ ಜನರು ಇಂಥ ಕಟ್ಟಡಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಅಕ್ರಮ ಕಟ್ಟಡಗಳಿಂದ ಕೆಲವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಸೆರಿಲಿಂಗಂಪಲ್ಲಿಯಲ್ಲೂ ಇಂತಹ ಹಲವು ಕಟ್ಟಡಗಳಿವೆ. ಅಧಿಕಾರಿಗಳು ಕ್ರಮ ಕೈಗೊಂಡರೂ ಕೆಲವರು ನಿಯಮ ಪಾಲಿಸುತ್ತಿಲ್ಲ ಎಂದು ಶಾಸಕ ಗಾಂಧಿ ಆರೋಪಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ದುರಂತಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ,(ಏಜೆನ್ಸೀಸ್).