Accident 
ದೇಶ

Accident: ಮಿರ್ಜಾಪುರದಲ್ಲಿ ಭೀಕರ ಸರಣಿ ಅಪಘಾತ: 11 ಮಂದಿ ದಾರುಣ ಸಾವು!

ಯುಪಿ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದ ಭೀಕರ (Accident) ಅಪಘಾತದಲ್ಲಿ 11 ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಬುಧವಾರ ರಾತ್ರಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಡ್ರಾಮಂಡಗಂಜ್ ಪ್ರದೇಶದ ಕಣಿವೆ ಇಳಿಜಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಇಳಿಜಾರಿನಲ್ಲಿ ಬರುತ್ತಿದ್ದ ಟ್ರಕ್‌ನ ಬ್ರೇಕ್ ವೈಫಲ್ಯಗೊಂಡಿದ್ದು, ನಿಯಂತ್ರಣ ತಪ್ಪಿದ ವಾಹನ ಮುಂದೆ ಸಾಗುತ್ತಿದ್ದ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ನಡುವೆ ಕಾರೊಂದು ಎರಡು ಟ್ರಕ್‌ಗಳ ನಡುವೆ ಸಿಲುಕಿಕೊಂಡು ಭಾರೀ ಹಾನಿಗೊಳಗಾಯಿತು.
ಅಪಘಾತದ ಸರಣಿಯಲ್ಲಿ ಮತ್ತೊಂದು ವಾಹನಕ್ಕೂ ಡಿಕ್ಕಿ ಹೊಡೆದಿದ್ದು, ಅದು ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಕೆಲವರು ವಾಹನದೊಳಗೇ ಸಿಲುಕಿಕೊಂಡು ಜೀವ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ರಾತ್ರಿ ಸುಮಾರು 8.30ರ ಹೊತ್ತಿಗೆ ನಡೆದಿದ್ದು, ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು.
ಮೃತರ ಗುರುತು ಪತ್ತೆ ಕಾರ್ಯ ಇನ್ನೂ ಮುಂದುವರಿದಿದ್ದು, ಕೆಲವರು ಬೆಂಕಿಯಿಂದ ಗುರುತಿಸಲು ಕಷ್ಟವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಎರಡು ಟ್ರಕ್‌ಗಳು, ಕಾರು ಮತ್ತು ಎಸ್‌ಯುವಿ ಸೇರಿ ಹಲವು ವಾಹನಗಳು ಭಾಗಿಯಾಗಿವೆ.
ಪ್ರಾಥಮಿಕ ತನಿಖೆಯಲ್ಲಿ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಪ್ರಮುಖ ಕಾರಣವೆಂದು ತಿಳಿದುಬಂದಿದ್ದು, ಪ್ರಕರಣದ ಕುರಿತು ಸವಿಸ್ತಾರ ತನಿಖೆ ಮುಂದುವರಿದಿದೆ. ಘಟನೆ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ದಾರುಣ ಘಟನೆ ರಸ್ತೆ ಸುರಕ್ಷತೆ ಹಾಗೂ ಭಾರೀ ವಾಹನಗಳ ತಾಂತ್ರಿಕ ಸ್ಥಿತಿಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ,(ಏಜೆನ್ಸೀಸ್).