ದೇಶ

ಭೀಕರ ರಸ್ತೆ ಅಪಘಾತ: ನಿಂತಿದ್ದ ಟ್ರಕ್​ಗೆ ಗುದ್ದಿದ ಎಸ್‌ಯುವಿ ಕಾರು: ಏಳು ಮಂದಿ ಬಲಿ | accident

ಗುಜರಾತ್‌ನ ಭಾವನಗರ ಜಿಲ್ಲೆಯ ಹೆದ್ದಾರಿಯಲ್ಲಿ ಎಸ್‌ಯುವಿ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಮಂಗಳವಾರ(ಅ. 06) ವರದಿಯಾಗಿದೆ.

ಅಹಮದಾ​ಬಾದ್: ಗುಜರಾತ್‌ನ ಭಾವನಗರ ಜಿಲ್ಲೆಯ ಹೆದ್ದಾರಿಯಲ್ಲಿ ಎಸ್‌ಯುವಿ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಮಂಗಳವಾರ(ಅ. 06) ವರದಿಯಾಗಿದೆ.

ಭಾವನಗರ ಜಿಲ್ಲೆಯ ತಲಾಜಾ ತಾಲೂಕಿನ ಟ್ರಾಪಾಜ್ ಗ್ರಾಮದ ಬಳಿ, ಭಾವನಗರ-ಸೋಮನಾಥ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಎಸ್‌ಯುವಿ ವಾಹನವು ನಿಂತಿದ್ದ ಟ್ರೈಲರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಪಾಂಡೆ, ಅಲಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಟ್ರಾಪಾಜ್ ಗ್ರಾಮದ ಬಳಿ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಟ್ರೈಲರ್ ನಿಲ್ಲಿಸಲಾಗಿತ್ತು. ಹಿಂದಿನಿಂದ ಬಂದ ಎಸ್‌ಯುವಿ ಕಾರು ಟ್ರೈಲರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು. ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮೃತಪಟ್ಟವರು ಭಾವನಗರದಿಂದ ಅಲಂಗ್‌ಗೆ ಪ್ರಯಾಣಿಸುತ್ತಿದ್ದರು. ಅಲ್ಲಿನ ಹಡಗು ನಿರ್ಮಾಣ ಘಟಕವೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಇನ್ನೂ ಎಸ್​ಯುವಿ ಕಾರಿನ ಡಿಕ್ಕಿಯ ರಭಸಕ್ಕೆ ಟ್ರಕ್ ಮುಂದೆ ಸಾಗಿದ್ದು, ಕಾರಿನಲ್ಲಿದ್ದ ಎಲ್ಲರ ದೇಹಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎನ್ನಲಾಗಿದೆ. ಮತ್ತು ಕಾರು ಸಂಪೂರ್ಣವಾಗಿ ಜಖಂಗೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಾವನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ (ಏಜೆನ್ಸೀಸ್).