Accident 
ದೇಶ

ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ; ಬಸ್ ಮತ್ತು ಲಾರಿ ನಡುವೆ ಡಿಕ್ಕಿ: 8 ಮಂದಿ ಸಜೀವ ದಹನ! | Accident

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣದ ನಿರ್ಮಲ್‌ನಿಂದ ನೆಲ್ಲೂರಿಗೆ ಹೊರಟಿದ್ದ ಬಸ್.
  • ಮಾರ್ಕಾಪುರಂ ಜಿಲ್ಲೆಯಲ್ಲಿ ಮುಂಜಾನೆ 6 ಗಂಟೆಗೆ ಸಂಭವಿಸಿದ ದುರಂತ.
  • ಎಂಟು ಮಂದಿ ಸ್ಥಳದಲ್ಲೇ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ.
ಮಾರ್ಕಾಪುರಂ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ಇಂದು (ಗುರುವಾರ) ಮುಂಜಾನೆ ನಡೆದ ಸರಣಿ ದುರಂತವೊಂದರಲ್ಲಿ(Accident) ಕನಿಷ್ಠ ಎಂಟು ಮಂದಿ ಪ್ರಯಾಣಿಕರು ಬೆಂಕಿಗಾಹುತಿಯಾಗಿದ್ದಾರೆ. ಖಾಸಗಿ ಟ್ರಾವೆಲ್ಸ್ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಈ ಘೋರ ದುರಂತ ಸಂಭವಿಸಿದೆ.
ತೆಲಂಗಾಣದ ನಿರ್ಮಲ್‌ನಿಂದ ಆಂಧ್ರದ ನೆಲ್ಲೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್, ಬೆಳಿಗ್ಗೆ ಸುಮಾರು 6:00 ಗಂಟೆಯ ಸುಮಾರಿಗೆ ವೇಗವಾಗಿ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್‌ನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಕ್ಷಣಾರ್ಧದಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ.
ಮಾರ್ಕಾಪುರಂ ಡಿಎಸ್‌ಪಿ ನಾಗರಾಜು ಅವರು ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ಎಂಟು ಮಂದಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಸುಮಾರು 18 ರಿಂದ 20 ಪ್ರಯಾಣಿಕರನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದ್ದು, ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
CM ಚಂದ್ರಬಾಬು ನಾಯ್ಡು ದಿಗ್ಭ್ರಮೆ!
ಈ ದಾರುಣ ಘಟನೆಯ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಐಟಿ ಸಚಿವ ನಾರಾ ಲೋಕೇಶ್ ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಸರ್ಕಾರ ಸಂತ್ರಸ್ತ ಕುಟುಂಬಗಳ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ. "ಸಜೀವ ದಹನವಾಗಿರುವ ಪ್ರಯಾಣಿಕರ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅವರು ಹೇಳಿದ್ದಾರೆ,(ಏಜೆನ್ಸೀಸ್​).