ಘಟನೆ ನಡೆದ ಸ್ಥಳ  
ದೇಶ

ಭೀಕರ ರಸ್ತೆ ಅಪಘಾತ; ಕಂದಕ್ಕೆ ಉರುಳಿ ಬಿದ್ದ ಬಸ್; 9 ಸಾವು, 22ಕ್ಕೂ ಹೆ್ಚ್ಚು ಮಂದಿಗೆ ಗಾಯ | Accident

ವಿಜಯವಾಡ: ಆಂಧ್ರ ಪ್ರದೇಶದ ಅಲ್ಲೂರಿ ಸೀತರಾಮರಾಜು ಜಿಲ್ಲೆಯ ತುಳಸಿಪಕಲು ಗ್ರಾಮದ ಬಳಿ ಇಂದು(ಡಿ. 12) ಮುಂಜಾನೆ ಭೀಕರ ಅಪಘಾತ(Accident) ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದಿದೆ. ಸ್ಥಳದಲ್ಲೇ ಒಂಬತ್ತು ಜನ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಯಾಣಿಕರು ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮ ದೇವಸ್ಥಾನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಅರಣ್ಯ ಘಾಟ್‌ಗಳಲ್ಲಿ ತೀಕ್ಷ್ಣವಾದ ತಿರುವುಗಳಲ್ಲಿ ಸಾಗುವಾಗ ಭಾರೀ ಮಂಜಿನಿಂದಾಗಿ ಬಸ್ ಚಾಲಕನಿಗೆ ತಿರುವು ಕಾಣಿಸದಿರುವುದರಿಂದ ವಾಹನವು ರಸ್ತೆಯಿಂದ ಹೊರಬಂದು ಕಡಿದಾದ ಇಳಿಜಾರಿನ ಕೆಳಗೆ ಬಿದ್ದಿದೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿಗಳು, ಬಸ್ಸಿನಲ್ಲಿ 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ ಇದ್ದರು.ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಏಳು ಜನರನ್ನು ಸ್ಥಳದಿಂದ 15 ಕಿ.ಮೀ ದೂರದಲ್ಲಿರುವ ಸಿಎಚ್‌ಸಿ ಚಿಂತೂರಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಿರೀಕರಣದ ನಂತರ, ಗಾಯಾಳುಗಳನ್ನು ಭದ್ರಾಚಲಂಗೆ ಸ್ಥಳಾಂತರಿಸುತ್ತೇವೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಹಿರಿಯ ಅಧಿಕಾರಿಗಳು ತಕ್ಷಣ ಅಪಘಾತ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಸೂಚಿಸಿದ್ದು, ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಇನ್ನೂ ಘಟನೆಯ ಕುರಿತಂತೆ ಎಕ್ಸ್​ನಲ್ಲಿ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಗಳ ಪರಿಹಾರ ಘೋಷಣೆ ಮಾಡಿದ್ದಾರೆ (ಏಜೆನ್ಸೀಸ್).