ಘಟನೆಯ ಸ್ಥಳ 
ದೇಶ

ಭೀಕರ ರಸ್ತೆ ಅಪಘಾತ: ಹೆದ್ದಾರಿಯಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಬಸ್: ನಾಲ್ವರು ಸ್ಥಳದಲ್ಲೇ ಸಾವು: 20ಕ್ಕೂ ಹೆಚ್ಚು ಮಂದಿಗೆ ಗಾಯ | Accident

ಲಖನೌ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಇಂದು(ಜೂ. 30) ಮುಂಜಾನೆ ಹೆದ್ದಾರಿಯಲ್ಲಿ ಟ್ರಕ್​ವೊಂದಕ್ಕೆ ಬಸ್​ ಡಿಕ್ಕಿ ಹೊಡೆದು ಭೀಕರ ಅಪಘಾತ(Accident) ಸಂಭವಿಸಿದ್ದು, ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಯ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ವೇಳೆ ಬಸ್​ನಲ್ಲಿ ಒಟ್ಟು 65 ಪ್ರಯಾಣಿಕರಿದ್ದರು. ಬಸ್ ವೇಗವಾಗಿ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮುಂದಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಬಸ್​​ನ ಮುಂಭಾಗವು ನುಜ್ಜುಗುಜ್ಜಾಗಿದೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ರಾಯ ಠಾಣೆಯ ಪೊಲೀಸರು, ಎಸ್​ಡಿಆರ್​ಎಫ್ ಮತ್ತು ಅಗ್ನಿಶಾಮಕದಳದೊಂದಿಗೆ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಸ್ಸಿನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿ ಆಂಬ್ಯುಲೆನ್ಸ್‌ನಲ್ಲಿ ಮಥುರಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಥುರಾ(ಗ್ರಾಮೀಣ) ಎಸ್‌ಪಿ ಸುರೇಶ್ ಚಂದ್ರ ರಾವತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಯಮುನಾ ಎಕ್ಸ್‌ಪ್ರೆಸ್‌ವೇಯ ಮೂರನೇ ಲೇನ್‌ನಲ್ಲಿ ಅತಿ ವೇಗದಲ್ಲಿ ಚಲಿಸುತ್ತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಬೆಳಗಿನ ಜಾವ 4 ಗಂಟೆಗೆ ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).