ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮ ನಗರ ಕಾಲೋನಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಮೂರನೇ ಪತ್ನಿಯನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಲು ವಾರವಿಡೀ ಕೋಣೆಯೊಳಗೆ ಶವವನ್ನು ಸುಡಲು ಯತ್ನಿಸಿದ ಭಯಾನಕ ಘಟನೆ ಶನಿವಾರ ರಾತ್ರಿ ಬಯಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಬ್ರಿಜ್‌ಭಾನ್ ಎಂದೂ ಕರೆಯಲ್ಪಡುವ ರಾಮ್ ಸಿಂಗ್ ಎಂಬ ಆರೋಪಿಯು ತನ್ನ ಮೂರನೇ ಪತ್ನಿ ಪ್ರೀತಿಯೊಂದಿಗೆ ಲಹಾರ್ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಜನವರಿ 7 ರಂದು ಹಣದ ವಿವಾದದ ನಂತರ ಕೊಲೆ ನಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರೀತಿ ಆರ್ಥಿಕ ಸಹಾಯಕ್ಕಾಗಿ ಬೇಡಿಕೆ ಇಟ್ಟಿದ್ದರು ಮತ್ತು ಆರೋಪಿಯು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಭಾವಿಸಿದ್ದನು. ಪರಿಸ್ಥಿತಿಯಿಂದ ಹತಾಶೆಗೊಂಡು, ಆಕೆಯನ್ನು ಕೊಲ್ಲಲು ಪ್ಲ್ಯಾನ್ ರೂಪಿಸಿದ್ದನು.
ಪ್ರೀತಿಯನ್ನು ಕೋಣೆಗೆ ಕರೆದು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಶವವನ್ನು ಮನೆಯೊಳಗೆ ಬಚ್ಚಿಟ್ಟಿದ್ದ. ಶವ ಕೊಳೆಯಲು ಮತ್ತು ವಾಸನೆ ಬರಲು ಪ್ರಾರಂಭಿಸಿದಾಗ, ಅವನು ತನ್ನ ಮಗನಿಗೆ ಕಟ್ಟಿಗೆ ಮತ್ತು ದೊಡ್ಡ ಪೆಟ್ಟಿಗೆಯನ್ನು ತರಲು ಹೇಳಿದ್ದಾನೆ. ಹಲವು ದಿನಗಳ ಕಾಲ, ಆರೋಪಿಯು ಕೋಣೆಯೊಳಗೆ ಬೆಂಕಿಯನ್ನು ಉರಿಸುತ್ತಲೇ ಇದ್ದನು, ದೇಹವನ್ನು ತುಂಡುಗಳಾಗಿ ಕತ್ತರಿಸಿ ಸುಡಲು ಪ್ರಯತ್ನಿಸಿದನು. ಅವಶೇಷಗಳನ್ನು ಸಂಪೂರ್ಣವಾಗಿ ನಾಶಮಾಡಲು ವಿಫಲವಾದಾಗ, ವಾಸನೆಯನ್ನು ನಿಗ್ರಹಿಸಲು ಅವನು ಸುಟ್ಟ ಭಾಗಗಳು, ಮೂಳೆಗಳು, ಕಲ್ಲಿದ್ದಲು ಮತ್ತು ಬೂದಿಯನ್ನು ನೀರು ತುಂಬಿದ ನೀಲಿ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿದನು.
ಪ್ರಕರಣ ಬೆಳಕಿಗೆ ಬಂದಿದ್ದೇಗೆ?
ಶನಿವಾರ ರಾತ್ರಿ ಆಟೋ ರಿಕ್ಷಾ ಚಾಲಕನೊಬ್ಬ ಅನುಮಾನಾಸ್ಪದ ಸೂಟ್‌ಕೇಸ್‌ನಿಂದ ಬರುತ್ತಿದ್ದ ಭೀಕರ ದುರ್ವಾಸನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದಾಗ ಇಡೀ ಪ್ರಕರಣ ಜಗತ್ತಿಗೆ ತಿಳಿದಿದೆ.
ಕೊಲೆ ಮತ್ತು ವಿಕೃತಿ: ಆರೋಪಿ ನಿವೃತ್ತ ರೈಲ್ವೆ ನೌಕರ ಎಂದು ಗುರುತಿಸಲಾಗಿದ್ದು, ತನ್ನ ಮೂರನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಈತ, ಕೊಲೆಯನ್ನು ಮುಚ್ಚಿಹಾಕಲು ಬಾಡಿಗೆ ಮನೆಯ ಕೋಣೆಯೊಂದರಲ್ಲೇ ಕಳೆದ ಒಂದು ವಾರದಿಂದ ಶವವನ್ನು ಸುಟ್ಟು ಭಸ್ಮ ಮಾಡಲು ನಿರಂತರವಾಗಿ ಪ್ರಯತ್ನಿಸಿದ್ದಾನೆ.
ಕೋಣೆಯೊಳಗೆ ನರಕ ಸದೃಶ್ಯ ದೃಶ್ಯ: ಪೊಲೀಸರು ಬಾಡಿಗೆ ಮನೆಗೆ ಲಗ್ಗೆ ಇಟ್ಟಾಗ ಅಲ್ಲಿನ ದೃಶ್ಯ ಕಂಡು ದಂಗಾಗಿದ್ದಾರೆ. ಕೋಣೆಯ ಪೂರ್ತಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ಶವ ಅರ್ಧಕ್ಕಿಂತ ಹೆಚ್ಚು ಸುಟ್ಟು ಹೋಗಿತ್ತು. ವಾರದಿಂದ ಸತತವಾಗಿ ಶವ ಸುಡುತ್ತಿದ್ದರಿಂದ ಪರಿಸರವೆಲ್ಲಾ ದುರ್ವಾಸನೆಯಿಂದ ಕೂಡಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಸಿಪ್ರಿ ಬಜಾರ್ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆತ ತನ್ನ ಮೂರನೇ ಪತ್ನಿಯನ್ನು ಏಕೆ ಕೊಂದ? ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ,(ಏಜೆನ್ಸೀಸ್).