ಆರೋಪಿ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್
ಮುಂಬೈ: ಮಹಾರಷ್ಟ್ರದಲ್ಲಿ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರೀತಿ ಹೆಸರಲ್ಲಿ 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಏಕಾಂತದ ಕ್ಷಣಗಳನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ಮೇಲ್ ಮಾಡ್ತಿದ್ದ 19 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮರಾವತಿ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಸಂತ್ರಸ್ತ ಬಾಲಕಿಯೊಬ್ಬಳ ದೂರಿನಿಂದ ಈ ಪ್ರಕರಣ ಬಯಲಿಗೆ ಬಂದಿದೆ. ಪರತ್ವಾಡ ನಗರದ ನಿವಾಸಿ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಏಳು ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು ಶಾಕ್ ಆಗಿದ್ದಾರೆ. ಅದರಲ್ಲಿ ಸುಮಾರು 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಪತ್ತೆ ಹೆಚ್ಚಿದ್ದಾರೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಗುಂಪುಗಳ ಮೂಲಕ ಮುಗ್ಧ ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಿ ಪ್ರೀತಿ ಹೆಸರಲ್ಲಿ ಅವರನ್ನು ಬಲೆಗೆ ಬೀಳಿಸಿ ಮುಂಬೈ ಮತ್ತು ಪುಣೆಯಂತಹ ನಗರಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಜೊತೆಗೆ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲಾಕ್ಮೇಲ್ ಮಾಡ್ತಿದ್ದ ಎಂದು ಆರೋಪಿಸಲಾಗಿದೆ.
ವಿಡಿಯೋ ಇಟ್ಟುಕೊಂಡು ಆರೋಪಿ ಅನೇಕ ಬಾಲಕಿಯರಿಗೆ ಬೆದರಿಕೆ ಹಾಕಿದ್ದು, ಮತ್ತು ವೇಶ್ಯವಾಟಿಕೆ ದಂಧೆಗೆ ಒತ್ತಾಯಿಸಿದ್ದ ಆರೋಪ ಕೇಳಿ ಬಂದಿದೆ. ಇನ್ನೂ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್).