ನವದೆಹಲಿ: ದೆಹಲಿಯ ಕಟ್ಟಡವೊಂದರಲ್ಲಿ ಭೀಕರ ಅಗ್ನಿ ಅವಘಡ(fire tragedy) ಸಂಭವಿಸಿದ್ದು, ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾವು ಸಿಕ್ಕಿಬಿದ್ದಿದ್ದೇವೆ, ಸಹಾಯ ಕಳುಹಿಸಿ ಎಂದು ಮಹಿಳೆಯೊಬ್ಬರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ರಕ್ಷಣಾಪಡೆಗಳು ಸ್ಥಳಕ್ಕೆ ತಲುಪುವಷ್ಟರಲ್ಲೇ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯ ಲೋಧಿ ಕಾಲೋನಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದೆಹಲಿ ಅಗ್ನಿಶಾಮಕ ಸೇವೆಗಳಿಗೆ (DFS) ಲೋಧಿ ಕಾಲೋನಿಯ ಬಿಕೆ ದತ್ ಕಾಲೋನಿಯ ಚಾವ್ಲಾ ಸ್ವೀಟ್ಸ್ ಎದುರಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕರೆ ಬಂದಿದ್ದು, ಮಹಿಳೆಯೊಬ್ಬರು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾವು ಒಳಗೆ ಸಿಲುಕಿಕೊಂಡಿದ್ದೇವೆ. ದಯವಿಟ್ಟು ಬೇಗನೆ ಸಹಾಯ ಕಳುಹಿಸಿ ಎಂದು ಬೇಡಿಕೊಂಡಿದ್ದಾರೆ.
ಕೆಲವು ಕ್ಷಣಗಳ ಬಳಿಕ ಅವರ ಧ್ವನಿ ಮುಸುಕಾಗಿದ್ದು, ಬಳಿಕ ಕರೆ ಕಡಿತಗೊಂಡಿದೆ. ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಎರಡು ಅಗ್ನಿಶಾಮಕ ದಳದ ವಾಹನಗಳೊಂದಿಗೆ ಪೊಲೀಸ್ ಸಿಬ್ಬಂದಿಯ ತಂಡವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿತು.
ರಕ್ಷಣಾ ಕಾರ್ಯಾಚರಣೆ ಆರಂಭವಾಗುವ ಹೊತ್ತಿಗೆ, ಬೆಂಕಿ ಮನೆಯನ್ನು ಸಂಪೂರ್ಣವಾಗಿ ಸುಟ್ಟುಹಾಕಿತ್ತು. ಮೇಲಿನ ಮಹಡಿಯಿಂದ ದಟ್ಟವಾದ ಹೊಗೆ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ಭಯಬೀತರಾಗಿದ್ದರು. ರಕ್ಷಣಾ ಸಿಬ್ಬಂದಿ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿದ್ದು, ಒಳಗೆ ಮೂರು ಸುಟ್ಟ ದೇಹಗಳು ಕಂಡು ಬಂದಿವೆ. ಮೃತರನ್ನು 45 ವರ್ಷದ ಮಹಿಳೆ ಮತ್ತು ಅವರ 7 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳು ಎಂದು ಗುರುತಿಸಲಾಗಿದೆ.
ಈ ಕುರಿತು ಮಾತನಾಡಿರುವ ಅಧಿಕಾರಿಗಳು, ಬೆಂಕಿ ವೇಗವಾಗಿ ಹರಡಿ ಮನೆಯನ್ನು ಆವರಿಸಿತು, ಇದರಿಂದಾಗಿ ಬಲಿಪಶುಗಳು ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಯಾವುದೇ ಸ್ಥಳಾವಕಾಶವಿರಲಿಲ್ಲ. ಅಗ್ನಿಶಾಮಕ ದಳದವರು ಬಂದು ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಬೆಂಕಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).