ಮಹಿಳೆ ಮೇಲೆ ಎರಗುತ್ತಿರುವ ನಾಯಿಗಳು 
ದೇಶ

ಬೀದಿ ನಾಯಿಗಳ ಭೀಕರ ದಾಳಿ: ಅನ್ನ ಹಾಕುತ್ತಿದ್ದ ಮಹಿಳೆಯ ಮೇಲೆ ಅಟ್ಯಾಕ್; ವಿಡಿಯೋ ವೈರಲ್ | Stray Dogs

ಪ್ರಮುಖ ಮುಖ್ಯಾಂಶಗಳು

  • ಮನೆ ಮುಂದೆ ಮಹಿಳೆ ಮೇಲೆ ಎರಗಿದ ಬೀದಿ ನಾಯಿಗಳು
  • ಅನ್ನ ನೀಡಿದ ಮಹಿಳೆಯನ್ನೇ ಕಚ್ಚಿದ ಶ್ವಾನಗಳು
  • ಬೀದಿ ನಾಯಿಗೆ ತಿಂಡಿ ನೀಡುವವರು ನೋಡಲೇ ಬೇಕಾದ ವಿಡಿಯೋ
Stray Dogs: ಬೀದಿ ನಾಯಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ, ಪ್ರತಿದಿನ ಅವುಗಳಿಗೆ ಆಹಾರ ನೀಡಿ ಪ್ರೀತಿಯಿಂದ ಸಾಕುವವರ ಮೇಲೆಯೇ ನಾಯಿಗಳು ದಾಳಿ (Stray Dogs) ಮಾಡಿದರೆ ಹೇಗಾಗಬೇಡ?ಇಂತಹದ್ದೇ ಒಂದು ಘೋರ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಸ್ತೆ ಸುರಕ್ಷತೆ ಮತ್ತು ಬೀದಿ ನಾಯಿಗಳ ವರ್ತನೆಯ ಬಗ್ಗೆ ಚರ್ಚೆಗೆ ವೇದಿಕೆ ಕಲ್ಪಿಸಿದಂತಾಗಿದೆ.

ಮನೆ ಬಾಗಿಲಲ್ಲೇ ನಡೆದ ಭೀಕರ ದಾಳಿ

ವೈರಲ್ ಆಗಿರುವ ವಿಡಿಯೋನಲ್ಲಿ, ಮಹಿಳೆಯೊಬ್ಬರು ಮಾರುಕಟ್ಟೆಯಿಂದ ದಿನಸಿ ಸಾಮಾನುಗಳನ್ನು ಖರೀದಿಸಿ ತಮ್ಮ ಮನೆಗೆ ಮರಳುತ್ತಿರುತ್ತಾರೆ. ಅವರು ಮೆಟ್ಟಿಲು ಹತ್ತುತ್ತಿರುವಾಗ ಮನೆ ಬಾಗಿಲಿನ ಬಳಿಯೇ ನಾಯಿಯೊಂದು ಮಲಗಿರುತ್ತದೆ. ದುರದೃಷ್ಟವಶಾತ್, ಮೆಟ್ಟಿಲು ಹತ್ತಲು ಹೋದ ಮಹಿಳೆ ಆಯತಪ್ಪಿ ಕೆಳಗೆ ಬೀಳುತ್ತಾರೆ. ಈ ವೇಳೆ ಅವರ ಕೈಯಲ್ಲಿದ್ದ ಸಾಮಾನುಗಳ ಬ್ಯಾಗ್ ಮಲಗಿದ್ದ ನಾಯಿಯ ಮೈಮೇಲೆ ಬೀಳುತ್ತದೆ.
ಕ್ಷಣಾರ್ಧದಲ್ಲಿ ಬೆಚ್ಚಿಬಿದ್ದ ನಾಯಿ, ಏನನ್ನೂ ಯೋಚಿಸದೆ ಮಹಿಳೆಯ ಮೇಲೆ ದಾಳಿ ಮಾಡುತ್ತದೆ. ಮಹಿಳೆ ನೆಲದ ಮೇಲೆ ಬಿದ್ದಿದ್ದರಿಂದ ರಕ್ಷಿಸಿಕೊಳ್ಳಲು ಅಸಹಾಯಕರಾಗುತ್ತಾರೆ. ಇದನ್ನು ನೋಡಿದ ಸುತ್ತಮುತ್ತಲ ಇತರ ನಾಲ್ಕೈದು ನಾಯಿಗಳು ಕೂಡ ಓಡಿ ಬಂದು ಮಹಿಳೆಯನ್ನು ಕಚ್ಚಲು ಶುರು ಮಾಡುತ್ತವೆ.

ಜೀವ ಪಣಕ್ಕಿಟ್ಟು ಬಂದ ಸ್ಕೂಟರ್ ಸವಾರ

ನಾಯಿಗಳ ಹಿಂಡಿನ ನಡುವೆ ಸಿಲುಕಿ ಮಹಿಳೆ ನರಳಾಡುತ್ತಿರುವಾಗ, ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಕೂಡಲೇ ಸಹಾಯಕ್ಕೆ ಧಾವಿಸುತ್ತಾರೆ. ಅವರು ಧೈರ್ಯದಿಂದ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ ಕಾರಣ, ನಾಯಿಗಳು ಅಲ್ಲಿಂದ ಚದುರುತ್ತವೆ. ನಂತರ ಮನೆಯ ಒಳಗಿದ್ದವರು ಹೊರಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಯ ಕೈಯಿಂದ ತೀವ್ರ ರಕ್ತಸ್ರಾವವಾಗುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದೆ.

ಬಿಸ್ಕತ್ತು ಹಾಕುವವರಿಗೊಂದು ಪಾಠ: ನೆಟ್ಟಿಗರ ಆಕ್ರೋಶ

ಈ ವಿಡಿಯೋವನ್ನು @NCMIndiaa ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಅದರ ಶೀರ್ಷಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ನಾಯಿಗಳಿಗೆ ಬಿಸ್ಕತ್ತು ಹಾಕಿದರೆ ಅವು ಕಚ್ಚುವುದಿಲ್ಲ ಎಂದು ಉಪದೇಶ ನೀಡುವವರಿಗೆ ಈ ವಿಡಿಯೋ ಅರ್ಪಣೆ. ಈ ಮಹಿಳೆ ಪ್ರತಿದಿನ ಆ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಆದರೂ ಅವು ಅವರನ್ನು ಬಿಡಲಿಲ್ಲ. ಈಗ ಆಕೆಗೆ ರೇಬೀಸ್ ಚುಚ್ಚುಮದ್ದಿನ ಅಗತ್ಯವಿದೆ ಎಂದು ಬರೆಯಲಾಗಿದೆ.
ಈ ಪೋಸ್ಟ್ ಕೆಳಗೆ ನೂರಾರು ಜನ ಕಾಮೆಂಟ್ ಮಾಡಿದ್ದು, ಬೀದಿ ನಾಯಿಗಳ ಸಂಖ್ಯೆ ಮಿತಿಮೀರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರೀತಿಯೂ ಬೇಕು, ಆದರೆ ಸುರಕ್ಷತೆಯೂ ಮುಖ್ಯ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.

ಜಾಗ್ರತೆ ವಹಿಸಿ

ಬೀದಿ ನಾಯಿಗಳು ಯಾವಾಗ ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಹಠಾತ್ ಶಬ್ದ ಅಥವಾ ಈ ಘಟನೆಯಲ್ಲಿ ನಡೆದಂತೆ ಅವುಗಳ ಮೇಲೆ ಏನಾದರೂ ಬಿದ್ದಾಗ ಅವು ಪ್ರತಿಯಾಗಿ ದಾಳಿ ಮಾಡುವುದು ಹೆಚ್ಚು. ಆದ್ದರಿಂದ ಬೀದಿ ನಾಯಿಗಳ ಜತೆ ಹತ್ತಿರ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ,(ಏಜನ್ಸೀಸ್).