ವ್ಯಕ್ತಿಯ ತಲೆ ಕಡಿದು ದೇವರ ಮನೆಯಲ್ಲಿ ಹೂತಿಟ್ಟ ಆರೋಪಿ
- ವ್ಯಕ್ತಿಯ ತಲೆ ಕಡಿದು ದೇವರ ಮನೆಯಲ್ಲಿ ಹೂತಿಟ್ಟ ಆರೋಪಿ
- ಒಡಿಶಾದ ಬೋಲಂಗೀರ್‌ನಲ್ಲಿ ಭೀಕರ ಕೊಲೆ ಪ್ರಕರಣ
- ಬಿಟ್ಟು ಹೋಗಿದ್ದ ಹೆಂಡತಿಯನ್ನು ವಾಪಸ್ ಕರೆಸಿಕೊಳ್ಳಲು ಕೃತ್ಯ?
A man beheads his neighbor: ಹೆಂಡತಿ ಮತ್ತೆ ಮನೆಗೆ ಬರಬೇಕು ಅಂತ ವ್ಯಕ್ತಿಯೊಬ್ಬ ಭಯಾನಕ ಕೃತ್ಯ ಎಸಗಿದ್ದಾನೆ. ಪಕ್ಕದ ಮನೆಯವನನ್ನೇ ಕೊಲೆ ಮಾಡಿ, ಆತನ ತಲೆ ಕಡಿದು ದೇವರ ಮನೆಯಲ್ಲಿ ಹೂತಿಟ್ಟಿದ್ದಾನೆ ಎನ್ನಲಾಗಿದ್ದು, ಈ ಘಟನೆ ದೇಶವನ್ನೆ ಬೆಚ್ಚಿಬೀಳಿಸಿದೆ.
ಇನ್ನು ಈ ಘಟನೆ, ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ ನಡೆದಿದ್ದು, ತೆಬಡಾಮುಂಡಾ ಗ್ರಾಮದ ನಿವಾಸಿ ಸಂತೋಷ್ ಖರ್ಸೆಲ್(45) ಆಗಸ್ಟ್ 18ರಿಂದ ಕಾಣೆಯಾಗಿದ್ದರು. ಆದರೆ ಕಳೆದ ಗುರುವಾರ ಬಾಗಡಾ ಗ್ರಾಮದ ಕೆರೆಯಲ್ಲಿ ಅವರ ರುಂಡವಿಲ್ಲದ ಶವ ಪತ್ತೆಯಾಗಿದೆ. ಸಂತೋಷ್ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದಾಗ, ಅವರು ಕೊನೆಯದಾಗಿ ಸತ್ರುಘ್ನ ಸಾಹು(40) ಎಂಬುವನನ್ನು ಭೇಟಿಯಾಗಿದ್ದು ಗೊತ್ತಾಗಿದೆ.
ಇನ್ನು, ಪೊಲೀಸರು ಸಾಹುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂತೋಷ್ ಕೊಲೆಯಾದ ವಿಚಾರ ಬೆಳಕಿಗೆ ಬಂದಿದೆ. ಅಕ್ಕ-ಪಕ್ಕದ ಮನೆಯವರಾದ ಸಂತೋಷ್ ಮತ್ತು ಸತ್ರುಘ್ನ ಇಬ್ಬರೂ ಸೇರಿ ಪಾರ್ಟೀ ಮಾಡಿದ್ದು, ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕಿರಿಕ್ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಸಂತೋಷ್ನ್ನನ್ನು ಸತ್ರುಘ್ನ ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದಾಗ ಮತ್ತೊಂದು ರೋಚಕ ವಿಷಯ ಬಯಲಾಗಿದೆ.
ಹೆಂಡತಿ ವಾಪಸ್ ಬರಲಿ ಎಂದು ಕೊಲೆ?
ಪೊಲೀಸರ ಪ್ರಕಾರ, ಸಾಹುವಿನ ಹೆಂಡತಿ ಸುಮಾರು ಮೂರು ವರ್ಷಗಳ ಹಿಂದೆ ಆತನನ್ನು ಬಿಟ್ಟು ಹೋಗಿದ್ದಳು. ಹೆಂಡತಿ ಮತ್ತೆ ತನ್ನ ಬಳಿ ಬರಬೇಕು ಎಂಬ ಕಾರಣಕ್ಕೆ ಸಾಹು ಈ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪತ್ನಿ ಮರಳಿ ಬರಲು ಪತಿ ವಾಮಾಚಾರ ಅಥವಾ ಮೂಢನಂಬಿಕೆ ಮೊರೆ ಹೋಗಿದ್ದ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.
ದೇವರ ಕೋಣೆಯಲ್ಲಿ ತಲೆ ಪತ್ತೆ
ಬಳಿಕ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಈ ವೇಳೆ ಮನೆಯ ದೇವರ ಕೋಣೆಯಲ್ಲಿ ಸಂತೋಷ್ನ ತಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ರುಘ್ನ ಸಾಹುವನ್ನು ಬಂಧಿಸಿದ್ದು. ಕೊಲೆಗೆ ಬಳಸಿದ ಮಾರಕಾಸ್ತ್ರವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).