ರಾಯ್ಪುರ: ಛತ್ತೀಸ್ಗಢದ ಬಲೋದ್ ಜಿಲ್ಲೆಯ ಮಾರ್ಕಟೋಲಾ ಘಾಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ(ಸೆ. 25) ರಸ್ತೆ ಬದಿ ನಿಂತಿದ್ದ ಪಿಕಪ್ ವ್ಯಾನ್‌ಗೆ ಟ್ರಕ್ವೊಂದು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, 15 ರಿಂದ 20 ಯುವಕರ ಗುಂಪೊಂದು ಧಮತಾರಿಯಲ್ಲಿ ನಡೆದ ಗಣೇಶ ವಿಸರ್ಜನಾ ಸಮಾರಂಭದಲ್ಲಿ ಪಾಲ್ಗೊಂಡು ಬಲೋದ್‌ಗೆ ವಾಪಸ್ ಆಗುತ್ತಿತ್ತು. ಧುಮಾಲ್ ಬ್ಯಾಂಡ್ ಮತ್ತು ಡಿಜೆ ಸೌಂಡ್ ಸಿಸ್ಟಮ್‌ಗಳನ್ನು ಹೊತ್ತಿದ್ದ ಅವರ ಪಿಕಪ್ ವ್ಯಾನ್ ಮಾರ್ಕಟೋಲಾ ಘಾಟ್ ಬಳಿ ಕೆಟ್ಟು ನಿಂತಿದೆ.
ಚಾಲಕ ವಾಹನವನ್ನು ರಸ್ತೆಯ ಬದಿ ನಿಲ್ಲಿಸಿದ್ದು, ಹಲವು ಯುವಕರು ಮಳೆಯಿಂದ ಆಶ್ರಯ ಪಡೆಯಲು ವಾಹನದ ಕ್ಯಾಬಿನ್‌ನಲ್ಲೇ ಕೂತಿದ್ದಾರೆ. ಕೆಲವೇ ಕ್ಷಣಗಳಲ್ಲಿ, ಭತ್ತವನ್ನು ಹೊತ್ತು ವೇಗವಾಗಿ ಬರುತ್ತಿದ್ದ ಟ್ರಕ್, ಮುಂಭಾಗದಿಂದ ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರಕ್ ಪಲ್ಟಿಯಾಗಿದ್ದು, ಅದರಲ್ಲಿ ಭತ್ತದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹಲವು ಯುವಕರು ಅವುಗಳ ಅಡಿ ಸಿಲುಕಿದ್ದಾರೆ.
ಇನ್ನೂ ಕೆಲವರು ಪಲ್ಟಿಯಾದ ವಾಹನದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗೆ ಗಾಯಗೊಂಡು ಕೆಲವರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ರಾಯ್ಪುರ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).