ಅಹ್ಮದಾಬಾದ್: ಗುಜರಾತ್-ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಜೂ. 02) ಭೀಕರ ರಸ್ತೆ ಅಪಘಾತ(Accident) ಸಂಭವಿಸಿದ್ದು, ಎರಡು ಬಸ್ಸುಗಳು ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಎಂಟು ಪ್ರಯಾಣಿಕರು ಸಜೀವ ದಹನವಾಗಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಾರ್ಡೋಲಿ ತಾಲೂಕಿನ ಉವಾ ಮತ್ತು ಮಾಣೆಕ್‌ಪುರ ಗ್ರಾಮಗಳ ನಡುವಿನ ಧುಲೆ-ಸೂರತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಧುಲೆಯಿಂದ ನವಪುರ ಮೂಲಕ ಸೂರತ್‌ಗೆ ಹೋಗುತ್ತಿದ್ದ ಎಸ್‌ಟಿ ಬಸ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಎಸ್‌ಟಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಡಿಕ್ಕಿ ರಭಸಕ್ಕೆ ಒಂದು ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ. ಬಳಿಕ ಕ್ಷಣಾರ್ಧದಲ್ಲಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಬೆಂಕಿ ಆವರಿಸಿಕೊಂಡಿದೆ. ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಹೊರಬರಲು ಅವಕಾಶ ಸಿಗದೆ ಏಳು ಪ್ರಯಾಣಿಕರು ಸಜೀವದಹನವಾಗಿದ್ದಾರೆ.
ಇನ್ನೂ ಅಪಘಾತದ ಮಾಹಿತಿ ಬಂದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಮತ್ತು 108 ಆಂಬ್ಯುಲೆನ್ಸ್ ವಾಹನಗಳು ಸ್ಥಳಕ್ಕೆ ತಲುಪಿ ರಕ್ಷಣ ಕಾರ್ಯಾಚರಣೆ ನಡೆಸಿವೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸೂರತ್ ಗ್ರಾಮೀಣ ಎಸ್ಪಿ ರಾಜೇಶ್ ಗಾಧಿಯಾ , ಬಸ್‌ನಲ್ಲಿ ಸಂಭವಿಸಿದ ಬೆಂಕಿಯನ್ನು ಅಗ್ನಿಶಾಮಕ ದಳ ನಿಯಂತ್ರಣಕ್ಕೆ ತಂದಿದೆ. ಗಾಯಾಳುಗಳನ್ನು ರಕ್ಷಿಸಿ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಅಪಘಾತದ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).