ಚೆನ್ನೈ: ತಮಿಳುನಾಡಿನ ಸೇಲಂನ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ(ಮಾ. 20) ಭೀಕರ ಅಪಘಾತ(Accident) ಸಂಭವಿಸಿದ್ದು, ಹೆದ್ದಾರಿಯ ಅರಿಯನೂರು ಬಳಿ ಸರ್ಕಾರಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಬರ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೊಯಮತ್ತೂರಿನಿಂದ ಸೇಲಂಗೆ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ ಬಸ್, ನಿಯಂತ್ರಣ ತಪ್ಪಿ ತಮ್ಮ ಲೇನ್ನಿಂದ ಹೊರ ಬಂದು ಸೆಂಟರ್ ಮೀಡಿಯನ್ ದಾಟಿ, ವಿರುದ್ಧ ಲೇನ್‌ಗೆ ಪ್ರವೇಶಿಸಿ ಎದುರಿಗೆ ಬರ್ತಿದ್ದ ಟೆಂಪೋ ಮತ್ತು ದ್ವಿಚಕ್ರ ವಾಹನಗಳಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಘಟನೆಯ ದೃಶ್ಯಾ ಸಿಸಿಟಿವಿಯಲ್ಲಿ ದಾಖಲಾಗಿದೆ.
ಟೆಂಪೋದಲ್ಲಿದ್ದ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಒಂದೇ ಕುಟುಂಬದ 10ಕ್ಕೂ ಹೆಚ್ಚು ಮಂದಿ ಸಮಾರಂಭಕ್ಕೆ ತೆರಳಿ ವಾಪಸ್ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಮೃತರನ್ನು ಸೆಲ್ವರಾಜ್, ಮುರುಗನ್, ಅಮುಧಾ, ಮಣಿಕಂದನ್, ಇರುಸಾಯಿ, ಮಣಿಕಂದನ್ ಅವರ ಪತ್ನಿ ಸತ್ಯ, ಐದು ವರ್ಷದ ನಿತಿಷಾ ಮತ್ತು 11 ತಿಂಗಳ ಮಗು ಜೀವಿಕಾ ಎಂದು ಗುರುತಿಸಲಾಗಿದೆ.
ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಘಟನೆ ಚಾಲಕನ ಅತಿ ವೇಗದ ಚಾಲನೆಯಿಂದ ಆಗಿದೆಯೇ ಅಥವಾ ಯಾಂತ್ರಿಕ ವೈಫಲ್ಯದಿಂದ ಆಗಿದೆಯೇ ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).