ಘಟನೆಯ ಸ್ಥಳ 
ದೇಶ

ಭೀಕರ ಅಪಘಾತ; ಡಿವೈಡರ್​ಗೆ ಡಿಕ್ಕಿಯಾಗಿ ಫ್ಲೈಓವರ್​ನಿಂದ ಬಿದ್ದ ಫಾರ್ಚೂನರ್ ಕಾರು; ಮೂವರು ಸ್ನೇಹಿತರು ದುರ್ಮರಣ | Accident

ಜೈಪುರ: ಲಡಾಖ್ ಪ್ರವಾಸ ಮುಗಿಸಿ ಮನೆಗೆ ವಾಪಾಸ್ ಆಗುವಾಗ ಟೊಯೊಟಾ ಫಾರ್ಚೂನರ್ ಕಾರೊಂದು ಹೆದ್ದಾರಿಯ ಡಿವೈಡರ್​ಗೆ ಡಿಕ್ಕಿ ಹೊಡೆದು ಫ್ಲೈಓವರ್​ನಿಂದ ಕೆಳಗೆ ಬಿದ್ದು ಭೀಕರ ಅಪಘಾತ(Accident) ಸಂಭವಿಸಿದ್ದು, ಪರಿಣಾಮ ಕಾರಿನಲ್ಲಿದ್ದ ಮೂವರು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗುರುವಾರ(ಮಾ. 19) ವರದಿಯಾಗಿದೆ.
ರಾಜಸ್ಥಾನದ ಕೋಟಾ ಬಳಿಯ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಪುಣೆ ಮೂಲದ 10 ಸ್ನೇಹಿತರು ಮೂರು ಕಾರುಗಳಲ್ಲಿ ಲಡಾಖ್ ಪ್ರವಾಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದರು ಎನ್ನಲಾಗಿದೆ. ಸಿದ್ಧಾಂತ್, ಮಾಥುರೇಶ್ ಪಡಲೆ ಮತ್ತು ಕುನಾಲ್ ಮೃತರು. ಇನ್ನೆರಡು ಕಾರುಗಳು ವಿರಾಮಕ್ಕಾಗಿ ನಿಂತಿದ್ದವು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಕೈಥುನ್ ಸ್ಟೇಷನ್ ಹೌಸ್ ಆಫೀಸರ್ ಮನೋಜ್ ಸಿಂಗ್ ಸಿಕಾರ್ವಾರ್, ಚಾಲಕನ ನಿಯಂತ್ರಣ ತಪ್ಪಿ ಎಸ್‌ಯುವಿ ಫ್ಲೈಓವರ್‌ನಿಂದ ಕೆಳಗೆ ಬಿದ್ದಿತು. ಪರಿಣಾಮ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದಿರಬಹುದು. ಹೀಗಾಗಿ ಕಾರು ಕರಾಡಿಯಾ ಮತ್ತು ಬಾಲಾಪುರ ನಡುವಿನ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಫ್ಲೈಓವರ್‌ನಿಂದ ದೊಡ್ಡ, ಒಣಗಿದ ಚರಂಡಿಗೆ ಬಿದ್ದಿದೆ ಎಂದು ಹೇಳಿದ್ದಾರೆ.
ಪೊಲೀಸರು ಸ್ಥಳೀಯರ ಸಹಾಯದಿಂದ ಕಾರನ್ನು ಚರಂಡಿಯಿಂದ ಮೇಲೆತ್ತಿದ್ದು, ಶವಗಳನ್ನು ಹೊರ ತೆಗೆದು ಕೈತುನ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿದ್ದಾರೆ. ಘಟನೆ ಬಗ್ಗೆ ಮೃತರ ಕುಟುಂಬಸ್ಥರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).