Begum Khaleda Zia | ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ 
ದೇಶ

ಖಲೀದಾ ಜಿಯಾ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ.. ಭಾರತ-ಬಾಂಗ್ಲಾ ಸಂಬಂಧಕ್ಕೆ ಅವರ ದೃಷ್ಟಿಕೋನವೇ ದಾರಿದೀಪ ಎಂದ ನಮೋ | Begum Khaleda Zia

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು (ಡಿ. 30 ಮಂಗಳವಾರ) ನಿಧನರಾಗಿದ್ದು, ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, 2015 ರಲ್ಲಿ ಜಿಯಾ ಅವರ ಭೇಟಿಯನ್ನು ಸ್ಮರಿಸಿಕೊಂಡಿದ್ದಾರೆ. ಅವರ ದೃಷ್ಟಿಕೋನ ಮತ್ತು ಪರಂಪರೆ ಭಾರತ-ಬಾಂಗ್ಲಾ ಸಂಬಂಧಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಆಶಿಸುವುದಾಗಿ ಬರೆದುಕೊಂಡಿದ್ದಾರೆ.
ಬಾಂಗ್ಲಾ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಅವರ ಕುಟುಂಬ ಮತ್ತು ಬಾಂಗ್ಲಾದೇಶದ ಎಲ್ಲಾ ಜನರಿಗೆ ನಮ್ಮ ಪ್ರಾಮಾಣಿಕ ಸಂತಾಪಗಳು. ದೇವರು ಅವರ ಕುಟುಂಬಕ್ಕೆ ಈ ಅಗಲಿಕೆಯ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಮತ್ತು ಭಾರತ-ಬಾಂಗ್ಲಾದೇಶ ಸಂಬಂಧಗಳಿಗೆ ಅವರು ನೀಡಿದ ಪ್ರಮುಖ ಕೊಡುಗೆಗಳು ಯಾವಾಗಲೂ ಸ್ಮರಣೀಯ, 2015 ರಲ್ಲಿ ಢಾಕಾದಲ್ಲಿ ಅವರೊಂದಿಗಿನ ಆತ್ಮೀಯ ಭೇಟಿಯನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ದೃಷ್ಟಿಕೋನ ಮತ್ತು ಪರಂಪರೆ ನಮ್ಮ ಪಾಲುದಾರಿಕೆಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಖಲೀದಾ ಜಿಯಾ ನಿಧನ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಖಲೀದಾ ಜಿಯಾ ತಮ್ಮ 80 ನೇ ವಯಸ್ಸಿನಲ್ಲಿ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಡಿಸೆಂಬರ್ ಆರಂಭದಲ್ಲಿ ಪ್ರಧಾನಿ ಮೋದಿ, ಖಲೀದಾ ಜಿಯಾ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಭಾರತವು ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲಿ ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದು ಬಾಂಗ್ಲಾದೇಶಕ್ಕೆ ಭರವಸೆ ನೀಡಿದ್ದರು.

ಖಲೀದಾ ಜಿಯಾ ಜೀವನ

ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಖಲೀದಾ ಜಿಯಾ ಕೂಡ ಒಬ್ಬರು. ಹತ್ಯೆಗೀಡಾದ ಅಧ್ಯಕ್ಷ ಜಿಯಾ ಉರ್ ರೆಹಮಾರ್​ರ ಪತ್ನಿಯಾಗಿರುವ ಖಲೀದಾ, 1991 ರಿಂದ 1996 ರವರೆಗೆ ಮತ್ತು 2001 ರಿಂದ 2006 ರವರೆಗೆ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 1945 ರ ಆಗಸ್ಟ್ 15 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ ಅವರು, ಬಾಂಗ್ಲಾದೇಶದ ಮೊದಲ ಚುನಾಯಿತ ಮಹಿಳಾ ಸರ್ಕಾರದ ಮುಖ್ಯಸ್ಥರಾದರು ಮತ್ತು ದಶಕಗಳ ಕಾಲ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಮುನ್ನಡೆಸಿದರು.
ಖಲೀದಾ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು, ಹಿರಿಯ ಮಗ ತಾರಿಕ್ ರೆಹಮಾನ್ ಬಿಎನ್‌ಪಿಯ ಹಂಗಾಮಿ ಅಧ್ಯಕ್ಷರಾಗಿದ್ದಾರೆ. 17 ವರ್ಷಗಳ ಗಡಿಪಾರಿನ ಬಳಿಕ ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಮರಳಿದ್ದು, ಖಲೀದಾ ಕಿರಿಯ ಮಗ ಅರಾಫತ್ ರೆಹಮಾನ್ 2015 ರಲ್ಲಿ ಹೃದಯಾಘಾತದಿಂದ ನಿಧನರಾದರು(ಏಜೆನ್ಸೀಸ್​).