Suvendu Adhikari | ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ
ಕೊಲ್ಕತ್ತಾ: ಇಲ್ಲಿನ ತಿಲ್ಜಾಲಾದಲ್ಲಿ ನಡೆದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೋಮವಾರ ಕಡಕ್ ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸುವ ಮತ್ತು ಗೂಂಡಾಗಿರಿ ನಡೆಸುವವರ ವಿರುದ್ಧ ತಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸುವೇಂದು, ಸದ್ಯ ಈ ರೀತಿಯ ಕಲ್ಲು ತೂರಾಟದ ಘಟನೆಗಳು ಕಾಶ್ಮೀರದಲ್ಲೂ ಸಹ ನಡೆಯುತ್ತಿಲ್ಲ. ಆದರೆ ಬಂಗಾಳದಲ್ಲಿ ನಡೆಯುತ್ತಿದೆ. ಇಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಉದಾಸೀನತೆ ಆರೋಪಿಗಳಲ್ಲಿ ಇದ್ದು, ಇನ್ಮುಂದೆ ಪೊಲೀಸರು ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಪೊಲೀಸರು ಗಾಯಗೊಂಡಾಗ ಗೃಹ ಸಚಿವರು ಎಸಿ ಕೋಣೆಯಲ್ಲಿ ಕುಳಿತು ತಮಾಷೆ ನೋಡುತ್ತಿದ್ದ ದಿನಗಳು ಮುಗಿದಿದ್ದು, ರಾಜ್ಯದಲ್ಲಿ ಬೇರೂರಿರುವ ಗೂಂಡಾಗಿರಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ನನ್ನ ಗುರಿ ಎಂದು ಶಪಥ ಮಾಡಿದರು.
ಘಟನೆಯ ಹಿನ್ನಲೆ!..
ಭಾನುವಾರ ನಡೆದ ಹಿಂಸಾಚಾರದಲ್ಲಿ ಆರು ಮಂದಿ ಪೊಲೀಸರು ಹಾಗೂ ಇಬ್ಬರು ಸಿಆರ್‌ಪಿಎಫ್ (CRPF) ಜವಾನರು ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 40 ಜನರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವವರೆಗೆ 40 ಕಂಪನಿಗಳ ಕೇಂದ್ರೀಯ ಅರೆಸೇನಾ ಪಡೆಗಳನ್ನು ಬಂಗಾಳದಲ್ಲೇ ನಿಯೋಜಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮನವಿ ಮಾಡಿರುವುದಾಗಿ ಸಿಎಂ ಸುವೇಂದು ಅಧಿಕಾರಿ ತಿಳಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿರುವ ಸಿಎಂ, ಧಾರ್ಮಿಕ ಘೋಷಣೆಗಳನ್ನು ದುರುಪಯೋಗಪಡಿಸಿಕೊಂಡು ಕಲ್ಲು ತೂರಾಟ ನಡೆಸುವುದು ಅಥವಾ ಶಾಂತಿ ಕದಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.
ಪಾರ್ಕ್ ಸರ್ಕಸ್ ವ್ಯಾಪ್ತಿಯ ಅಲ್ಪಸಂಖ್ಯಾತರು ಹೆಚ್ಚಾಗಿರುವ ತಿಲ್ಜಾಲಾದಲ್ಲಿ ಎರಡು ಜೀವಗಳನ್ನು ಬಲಿಪಡೆದ ಕಾರ್ಖಾನೆ ಅಗ್ನಿ ದುರಂತದ ಬೆನ್ನಲ್ಲೇ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಭಾನುವಾರ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯರು ರಸ್ತೆ ತಡೆ ನಡೆಸಿ ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಲ್ಲದೆ, ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದರು. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಪ್ರದೇಶದಲ್ಲಿ ದೊಡ್ಡ ಮಟ್ಟದ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ(ಏಜೆನನ್ಸೀಸ್).