ಹೈದರಾಬಾದ್‌ನ ಖಾಸಗಿ ಶಾಲೆಯಲ್ಲಿ ಕಲ್ಮಾ ವಿವಾದ!
- ಹೈದರಾಬಾದ್‌ನ ಖಾಸಗಿ ಶಾಲೆಯಲ್ಲಿ ಕಲ್ಮಾ ವಿವಾದ!
- ಎರಡನೇ ತರಗತಿಯ ಹಿಂದೂ ವಿದ್ಯಾರ್ಥಿಗೆ 'ಕಲ್ಮಾ' ಪಠಣ ಮಾಡಲು ಹೋಮ್‌ವರ್ಕ್ ನೀಡಿದ ಶಿಕ್ಷಕರು
- ಪಾಲಕರಿಂದ ಶಾಲಾ ಆಡಳಿತ ಮಂಡಳಿಗೆ ದೂರು
ಹೈದರಾಬಾದ್: ಹೈದರಾಬಾದಿನ ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿಯ ಹಿಂದೂ ವಿದ್ಯಾರ್ಥಿಯೊಬ್ಬನಿಗೆ ಕಲ್ಮಾ ಪಠಣವನ್ನು ಮಾಡುವಂತೆ (Hyderabad School Kalma Controversy) ಗೃಹಪಾಠ ನೀಡಿರುವ ವಿವಾದಾತ್ಮಕ ಘಟನೆ ವರದಿಯಾಗಿದೆ.
ಮನೆಗೆ ಬಂದ ಮಗನ ಗೃಹಪಾಠದ ಡೈರಿಯನ್ನು ಪರಿಶೀಲಿಸಿದಾಗ ಕಲ್ಮಾದ ಮೊದಲ ಹಾಗೂ ಎರಡನೇ ಭಾಗವನ್ನು ಹಾಗೂ ಫತೇಹ್ ಅನ್ನು ಓದುವಂತೆ ನಿರ್ದೇಶನ ಕೊಟ್ಟಿದ್ದಾರೆಂದು ಪಾಲಕರು ತಿಳಿಸಿದ್ದಾರೆ. ಇದನ್ನು ನೋಡಿ ಕೆಂಡಾಮಂಡಲವಾದ ಪಾಲಕರು ಶಾಲೆಯ ಮ್ಯಾನೇಜ್ಮೆಂಟ್ಗೆ ಈ ಕುರಿತು ದೂರನ್ನು ನೀಡಿದ್ದು, ಶಾಲೆಯಲ್ಲಿ ಕೇವಲ ಒಂದು ಧರ್ಮದ ಕುರಿತು ಅಭ್ಯಾಸ ಮಾಡಲು ಹೇಳಲು ಎಲ್ಲಿ ಹಕ್ಕಿದೆ ಎಂದು ಕೇಳಿದ್ದಾರೆ.
ರಾಜಕೀಯ ಆಯಾಮ ಕಂಡುಕೊಂಡ ಪ್ರಕರಣ!
ಈ ವಿವಾದದ ಕುರಿತು ಬಾಲಕನ ಅತ್ತೆ ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಶಾಲೆಯಲ್ಲಿ ಮಕ್ಕಳಿಗೆ ಈ ರೀತಿ ಧರ್ಮ ಬೋಧನೆ ಅದರಲ್ಲೂ ಹಿಂದೂ ಬಾಲಕನಿಗೆ ಮುಸ್ಲಿಮರ ಕಲ್ಮಾ ಪಠಣ ಮಾಡು ಎಂದು ಹೇಳಿರುವುದು ಎಷ್ಟು ಸರಿ ಎಂದು ಬರೆದುಕೊಂಡಿದ್ದರು.
ಈ ಘಟನೆ ಭುಗಿಲೇಳುತ್ತಿದ್ದಂತೆ ಸ್ಥಳೀಯ ಬಿಜೆಪಿ ನಾಯಕರು ಬಾಲಕನ ಪಾಲಕರ ಪರ ನಿಂತಿದ್ದು, ಶಾಲೆಯಲ್ಲಿ ಈ ರೀತಿಯ ಧಾರ್ಮಿಕ ಬೋಧನೆ ಸರಿಯಲ್ಲ, ಈ ಕುರಿತು ಕಾನೂನು ಸಮರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಬಗ್ಗೆ ಶಾಲಾ ಆಡಳಿತ ಮಂಡಳಿ ದೂರನ್ನು ದಾಖಲಿಸಿಕೊಂಡಿದ್ದು, ಆಂತರಿಕ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ, (ಏಜನ್ಸೀಸ್).