T20 WorldCup Final | ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಟೀಮ್ ಇಂಡಿಯಾ ಆಟಗಾರರು
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ (89) ಮತ್ತು ಅಭಿಷೇಕ್ ಶರ್ಮಾ (52) ಸ್ಫೋಟಕ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ ಕೇವಲ 6 ಓವರ್‌ಗಳಲ್ಲಿ 92 ರನ್ ಚಚ್ಚಿದ ಈ ಜೋಡಿ ಕಿವೀಸ್ ಬೌಲರ್‌ಗಳನ್ನು ಚೆಂಡಾಡಿದರು.
ಒನ್ಡೌನ್ ಆಗಿ ಬಂದ ಇಶಾನ್ ಕಿಶನ್ (54) ಕೂಡ ಅರ್ಧಶತಕ ಸಿಡಿಸಿ ರನ್ ವೇಗವನ್ನು ಕಾಯ್ದುಕೊಂಡರು. ಅಂತಿಮ ಹಂತದಲ್ಲಿ ಶಿವಂ ದುಬೆ ಕೇವಲ 8 ಎಸೆತಗಳಲ್ಲಿ 26 ರನ್ ಚಚ್ಚುವ ಮೂಲಕ ಭಾರತದ ಮೊತ್ತವನ್ನು 255/5 ಕ್ಕೆ ತಲುಪಿಸಿದರು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದ ಗರಿಷ್ಠ ಮೊತ್ತವಾಗಿದೆ.
ಗೆಲುವಿನ ಅಕ್ಷರ ಬರೆದ ಬುಮ್ರಾ
ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಅಪಾಯಕಾರಿ ಫಿನ್ ಅಲೆನ್ರನ್ನು ಅಕ್ಷರ್ ಪಟೇಲ್ ಪೆವಿಲಿಯನ್‌ಗೆ ಕಳುಹಿಸಿದರೆ, ಇದಾದ ಬಳಿಕ ಬಂದ ರಚಿನ್ ರವೀಂದ್ರ ವಿಕೆಟ್ನ್ನು ಜಸ್ಪ್ರೀತ್ ಬುಮ್ರಾ ಪಡೆದರು. ಟಿಮ್ ಸೀಫರ್ಟ್ (52) ಪ್ರತಿರೋಧ ತೋರಿದರೂ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಜಾಲಕ್ಕೆ ಕಿವೀಸ್ ತತ್ತರಿಸಿತು.
ಪಂದ್ಯದ ಅಂತಿಮ ಹಂತದಲ್ಲಿ ಮತ್ತೆ ಅಬ್ಬರಿಸಿದ ಬುಮ್ರಾ, ಜೇಮ್ಸ್ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ವಿಕೆಟ್ ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು. ಬುಮ್ರಾ ನಿಖರ ಯಾರ್ಕರ್‌ಗಳು ಮತ್ತು ಸ್ಲೋಯರ್ ಬಾಲ್‌ಗಳಿಗೆ ಕಿವೀಸ್ ಬ್ಯಾಟರ್‌ಗಳ ಬಳಿ ಉತ್ತರವಿರಲಿಲ್ಲ. ಅಂತಿಮವಾಗಿ ಭಾರತವು ದೊಡ್ಡ ಅಂತರದ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು(ಏಜೆನ್ಸೀಸ್).