ಜಲಗಾಂವ್: ಮಹಾರಾಷ್ಟ್ರದ ಪುರಸಭೆ ಚುನಾವಣೆಯಲ್ಲಿ ಕೊಲ್ಹೆ ಕುಟುಂಬವು ಅಭೂತಪೂರ್ವ ಯಶಸ್ಸು ದಾಖಲಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದೆ.
ಹೌದು, ಒಂದೇ ಕುಟುಂಬದ ಮೂವರು ಸದಸ್ಯರಾದ ಲಲಿತ್ ಕೋಲ್ಹೆ, ಅವರ ಪತ್ನಿ ಸಿಂಧುತಾಯಿ ಕೋಲ್ಹೆ ಮತ್ತು ಪುತ್ರ ಪಿಯೂಷ್ ಲಲಿತ್ ಕೋಲ್ಹೆ ಅವರು ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಭರ್ಜರಿ ಜಯ ಸಾಧಿಸಿದ್ದಾರೆ. ಇದೀಗ ಈ ವಿಜಯವು ಕೇವಲ ರಾಜಕೀಯ ಗೆಲುವಲ್ಲದೆ, ಆ ಕುಟುಂಬದ ಜನಪ್ರಿಯತೆ ಮತ್ತು ವರ್ಚಸ್ಸಿಗೆ ಸಾಕ್ಷಿಯಾಗಿದೆ.
ಮಹಾಯುತಿ ಟಿಕೆಟ್‌ನಲ್ಲಿ ಹ್ಯಾಟ್ರಿಕ್ ಗೆಲುವು
ಕೊಲ್ಹೆ ಕುಟುಂಬದ ಮೂವರೂ ಅಭ್ಯರ್ಥಿಗಳು ಮಹಾಯುತಿ (ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿ) ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಮಹಿಳಾ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನಡುವೆಯೂ ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ಸಿಂಧುತಾಯಿ ಕೋಲ್ಹೆ ಗೆಲುವು ಸಾಧಿಸಿದ್ದಾರೆ. ಯುವ ನಾಯಕತ್ವದ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ಪಿಯೂಷ್, ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ತಮ್ಮ ಚೊಚ್ಚಲ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಜೈಲಿನಿಂದಲೇ ಚುನಾವಣಾ ಸಮರ ಗೆದ್ದ ಲಲಿತ್ ಕೋಲ್ಹೆ
ಈ ಚುನಾವಣೆಯ ಅತ್ಯಂತ ಗಮನಾರ್ಹ ಸಂಗತಿಯೆಂದರೆ ಲಲಿತ್ ಕೋಲ್ಹೆ ಅವರ ಗೆಲುವು. ಕಾನೂನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿದ್ದ ಸಂದರ್ಭದಲ್ಲೇ ನಾಮಪತ್ರ ಸಲ್ಲಿಕೆಯಾಗಿತ್ತು. ದೈಹಿಕವಾಗಿ ಕ್ಷೇತ್ರದಲ್ಲಿ ಲಭ್ಯವಿಲ್ಲದಿದ್ದರೂ, ಅವರ ಅನುಪಸ್ಥಿತಿಯಲ್ಲಿ ಬೆಂಬಲಿಗರು ಮತ್ತು ಕುಟುಂಬಸ್ಥರು ನಡೆಸಿದ ಪ್ರಚಾರಕ್ಕೆ ಮತದಾರರು ಜೈ ಎಂದಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಜನಾದೇಶ ಪಡೆಯುವ ಮೂಲಕ ಲಲಿತ್ ಕೋಲ್ಹೆ ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದೇ ಕುಟುಂಬದ ಮೂವರು ಸದಸ್ಯರು ವಿವಿಧ ವಾರ್ಡ್‌ಗಳಿಂದ ಆಯ್ಕೆಯಾಗಿರುವುದು ವಿರೋಧ ಪಕ್ಷದವರಿಗೆ ಅಚ್ಚರಿ ಮೂಡಿಸಿದೆ. ಜಲಗಾಂವ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಲ್ಹೆ ಕುಟುಂಬವು ಹಲವು ವರ್ಷಗಳಿಂದ ಸಾಮಾಜಿಕ ಮತ್ತು ರಾಜಕೀಯವಾಗಿ ಸಕ್ರಿಯವಾಗಿದ್ದು, ಮತದಾರರು ಅವರ ಮೇಲಿಟ್ಟಿರುವ ನಂಬಿಕೆಯನ್ನು ಈ ಫಲಿತಾಂಶ ಪುನರುಚ್ಚರಿಸಿದೆ.
ಮಹಾಯುತಿ ಮೈತ್ರಿಕೂಟಕ್ಕೆ ಈ ಗೆಲುವು ಆ ಭಾಗದಲ್ಲಿ ಮತ್ತಷ್ಟು ಬಲ ತಂದಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಲಲಿತ್ ಕೋಲ್ಹೆ ಅವರಿಗೆ ಭವ್ಯ ಸ್ವಾಗತ ಕೋರಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ,(ಏಜೆನ್ಸೀಸ್).