ಫಾಲ್ಟಾ ಮರುಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಜಯ: ಟಿಎಂಸಿಗೆ ಬಿಗ್ ಶಾಕ್, 4ನೇ ಸ್ಥಾನಕ್ಕೆ ಕುಸಿದು ಠೇವಣಿ ಕಳೆದುಕೊಂಡ ಜಹಾಂಗೀರ್ ಖಾನ್! 
ದೇಶ

ಫಾಲ್ಟಾ ಮರುಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಜಯ: ಟಿಎಂಸಿಗೆ ಬಿಗ್ ಶಾಕ್, 4ನೇ ಸ್ಥಾನಕ್ಕೆ ಕುಸಿದು ಠೇವಣಿ ಕಳೆದುಕೊಂಡ ಜಹಾಂಗೀರ್ ಖಾನ್! Falta Repoll Result

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ಪತನದ ಸರಣಿ ಮುಂದುವರಿದಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಭೀಕರ ಸೋಲಿನ ಬೆನ್ನಲ್ಲೇ, ಭಾನುವಾರ (ಮೇ,24) ಪ್ರಕಟವಾದ ಫಾಲ್ಟಾ (Falta Repoll Result) ವಿಧಾನಸಭಾ ಕ್ಷೇತ್ರದ ಮರುಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಭರ್ಜರಿ ಜಯ ದಾಖಲಿಸಿದ್ದಾರೆ. ಬರೋಬ್ಬರಿ 1.09 ಲಕ್ಷ ಮತಗಳ ಬೃಹತ್ ಅಂತರದಿಂದ ಎದುರಾಳಿಯನ್ನು ಮಣಿಸಿರುವ ಬಿಜೆಪಿ, ಟಿಎಂಸಿಯ ಸಾಂಪ್ರದಾಯಿಕ ಭದ್ರಕೋಟೆಗೆ ಲಗ್ಗೆ ಇಟ್ಟಿದೆ.
ಮತ್ತೊಂದೆಡೆ, ಚುನಾವಣಾ ಕಣದಿಂದ ಅರ್ಧದಲ್ಲೇ ನಾಟಕೀಯವಾಗಿ ಹಿಂದೆ ಸರಿದಿದ್ದ ಟಿಎಂಸಿ ಅಭ್ಯರ್ಥಿ, ಸ್ವಯಂಘೋಷಿತ 'ಪುಷ್ಪ' ಜಹಾಂಗೀರ್ ಖಾನ್ ಕೇವಲ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟು ತೀವ್ರ ಮುಖಭಂಗ ಅನುಭವಿಸಿದ್ದಾರೆ. 22 ಸುತ್ತುಗಳ ಸುದೀರ್ಘ ಮತ ಎಣಿಕೆಯ ನಂತರ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ 1,49,666 ಮತಗಳನ್ನು ಪಡೆದು ಬೀಗಿದರೆ, ಸಿಪಿಐ(ಎಂ) ಅಭ್ಯರ್ಥಿ ಶಂಭು ನಾಥ್ ಕುರ್ಮಿ 40,645 ಮತಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಾಂಗ್ರೆಸ್‌ನ ಅಬ್ದುರ್ ರಜಾಕ್ ಮೊಲ್ಲಾ (10,084 ಮತಗಳು) ಮೂರನೇ ಸ್ಥಾನ ಪಡೆದಿದ್ದಾರೆ.

ಬಿಜೆಪಿಯ 208ನೇ ಸೀಟ್; ಧೂಳೀಪಟವಾಯ್ತು ದೀದಿ ಸಾಮ್ರಾಜ್ಯ!

ಕಳೆದ ಮೇ 4 ರಂದು ಪ್ರಕಟವಾದ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಒಟ್ಟು 293 ಸ್ಥಾನಗಳ ಪೈಕಿ 207 ಸೀಟುಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದ ಬಿಜೆಪಿ, ಈಗ ಫಾಲ್ಟಾ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಮೂಲಕ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು 208ಕ್ಕೆ ಹೆಚ್ಚಿಸಿಕೊಂಡಿದೆ. 2011ರಿಂದಲೂ ಟಿಎಂಸಿ ಪಕ್ಷದ ಅಭೇದ್ಯ ಕೋಟೆಯಾಗಿದ್ದ ಫಾಲ್ಟಾ ಕ್ಷೇತ್ರದಲ್ಲಿ ಈ ಮಟ್ಟದ ಹೀನಾಯ ಸೋಲನ್ನು ಮಮತಾ ಎಂದಿಗೂ ಊಹಿಸಿರಲಿಲ್ಲ. ಸಾರ್ವತ್ರಿಕ ಚುನಾವಣೆಯ ವೇಳೆ ಇಲ್ಲಿ ವ್ಯಾಪಕ ಅಕ್ರಮ, ಮತದಾರರಿಗೆ ಬೆದರಿಕೆ ಹಾಗೂ ಇವಿಎಂ ಗೋಲ್‌ಮಾಲ್ ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಿದ್ದ ಚುನಾವಣಾ ಆಯೋಗ, ಮೇ ತಿಂಗಳಲ್ಲಿ ಕಟ್ಟುನಿಟ್ಟಿನ ಮರುಚುನಾವಣೆಗೆ ಆದೇಶಿಸಿತ್ತು.

'ಸಿಂಗಂ' ಮುಂದೆ ತಲೆಬಾಗಿದ 'ಪುಷ್ಪ'!; ಕಣದಿಂದ ಓಡಿದ್ದ ಜಹಾಂಗೀರ್ ಖಾನ್!

ಫಾಲ್ಟಾ ಕ್ಷೇತ್ರದ ಚುನಾವಣಾ ಕಣವು ಇಡೀ ಬಂಗಾಳದಲ್ಲೇ ಅತ್ಯಂತ ಹೈ-ವೋಲ್ಟೇಜ್ ಸಸ್ಪೆನ್ಸ್ ಹಾಗೂ ರೋಚಕತೆಗೆ ಸಾಕ್ಷಿಯಾಗಿತ್ತು. ಉತ್ತರ ಪ್ರದೇಶದ ಖ್ಯಾತ ಎನ್‌ಕೌಂಟರ್ ಸ್ಪೆಷಲಿಸ್ಟ್ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ಆಯೋಗ ಇಲ್ಲಿಗೆ ನಿಯೋಜಿಸಿತ್ತು. ಇವರ ಖಡಕ್ ಶೈಲಿಗೆ ಬಂಗಾಳದಲ್ಲಿ 'ಸಿಂಗಂ' ಎಂಬ ಹೆಸರು ಬಂದಿತ್ತು. ಇದಕ್ಕೆ ಬಹಿರಂಗವಾಗಿಯೇ ಸವಾಲು ಹಾಕಿದ್ದ ಟಿಎಂಸಿಯ ಜಹಾಂಗೀರ್ ಖಾನ್, ಅವನು ಸಿಂಗಂ ಆದ್ರೆ, ನಾನು ಪುಷ್ಪ... ಯಾವುದಕ್ಕೂ ತಗ್ಗಲ್ಲ ಎಂದು ಅಲ್ಲು ಅರ್ಜುನ್ ಶೈಲಿಯಲ್ಲಿ ಅಬ್ಬರಿಸಿದ್ದರು.
ಆದರೆ, ಐಪಿಎಸ್ ಅಧಿಕಾರಿ ಅಜಯ್ ಪಾಲ್ ಖಾನ್ ಮನೆಗೆ ಭೇಟಿ ನೀಡಿ ಕಠಿಣ ಎಚ್ಚರಿಕೆ ನೀಡಿದ ಬೆನ್ನಲ್ಲೇ 'ಪುಷ್ಪ' ಜಹಾಂಗೀರ್ ಖಾನ್ ಅವರ ಸದ್ದು ಅಡಗಿತ್ತು. ಮತದಾನಕ್ಕೆ ಕೆಲವೇ ದಿನಗಳ ಮುನ್ನ ಅವರು ನಾಟಕೀಯವಾಗಿ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಆದರೆ, ಆಯೋಗದ ನಿಯಮಾವಳಿಗಳ ಪ್ರಕಾರ ವಾಪಸ್ ಪಡೆಯುವ ಗಡುವು ಮುಗಿದಿದ್ದರಿಂದ ಇವಿಎಂ ಯಂತ್ರದಲ್ಲಿ ಅವರ ಹೆಸರು ಮತ್ತು ಟಿಎಂಸಿ ಚಿಹ್ನೆ ಹಾಗೇ ಇತ್ತು. ಹೀಗಾಗಿ ಕಣದಲ್ಲೇ ಇಲ್ಲದ 'ಪುಷ್ಪ' ಕೇವಲ 7,783 ಮತಗಳನ್ನು ಪಡೆದು 4ನೇ ಸ್ಥಾನಕ್ಕೆ ಕುಸಿಯುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಕ್ಷೇತ್ರದಲ್ಲಿ ಟಿಎಂಸಿ ಕಾರ್ಯಕರ್ತರ ಅನಾಥ ಸ್ಥಿತಿ!

ಫಾಲ್ಟಾ ವಿಧಾನಸಭಾ ಕ್ಷೇತ್ರವು ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಹಾಗೂ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಬಂಗಾಳದಲ್ಲಿ ಅಧಿಕಾರ ಹೋದ ನಂತರ ಈ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತೆ ಸಂಘಟಿಸಲು ಟಿಎಂಸಿ ಭಾರಿ ಕಸರತ್ತು ನಡೆಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಮಮತಾ ಬ್ಯಾನರ್ಜಿ ಆಗಲಿ ಅಥವಾ ಅಭಿಷೇಕ್ ಬ್ಯಾನರ್ಜಿ ಆಗಲಿ ತಮ್ಮದೇ ಅಭ್ಯರ್ಥಿ ಜಹಾಂಗೀರ್ ಖಾನ್ ಪರವಾಗಿ ಒಂದೇ ಒಂದು ಸಾರ್ವಜನಿಕ ರ‍್ಯಾಲಿ ಅಥವಾ ಪ್ರಚಾರ ನಡೆಸಲಿಲ್ಲ. ನಾಯಕರೇ ಕೈಬಿಟ್ಟಿದ್ದರಿಂದ ಕಾರ್ಯಕರ್ತರು ಅನಾಥರಾಗಿದ್ದರು, ಇದು ಬಿಜೆಪಿಯ ಭರ್ಜರಿ ಲ್ಯಾಂಡ್‌ಸ್ಲೈಡ್ ವಿಕ್ಟರಿಗೆ ನೇರ ಹಾದಿ ಮಾಡಿಕೊಟ್ಟಿತು.
ಬಂಗಾಳದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಈ ಮೊದಲ ಮರುಚುನಾವಣೆಯ ಫಲಿತಾಂಶವು, ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ ಆಡಳಿತ ಕಂಪ್ಲೀಟ್ ಆಗಿ ಮುಕ್ತಾಯಗೊಂಡಿದೆ ಮತ್ತು ಸಿಎಂ ಸುವೇಂದು ಅವರ ಯೋಗಿ ಮಾದರಿಯ ಕಠಿಣ ಆಡಳಿತಕ್ಕೆ ಬಂಗಾಳದ ಜನತೆ ಮುದ್ರೆ ಒತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ,(ಏಜೆನ್ಸೀಸ್​).