ನವದೆಹಲಿ: ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು (ಗುರುವಾರ ಏ.16) ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ಸಂಸತ್ತಿನ ವಿಶೇಷ ಅಧಿವೇಶನದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ (PM Modi) ಪ್ರಧಾನಿ ನರೇಂದ್ರ ಮೋದಿ, ಈ ಅಧಿವೇಶನವನ್ನು ಮಹಿಳಾ ಸಬಲೀಕರಣದತ್ತ ಇಟ್ಟ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಲಿದ್ದು, ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನೀಡುವ ಗೌರವವೆಂದರೆ ರಾಷ್ಟ್ರಕ್ಕೆ ನೀಡುವ ಗೌರವ, ಮತ್ತು ಈ ಮನೋಭಾವದಿಂದಲೇ ನಾವು ಈ ದಿಕ್ಕಿನಲ್ಲಿ ದೃಢನಿಶ್ಚಯದಿಂದ ಮುನ್ನಡೆಯುತ್ತಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಮಸೂದೆಗಳ ಕುರಿತು ಕೇಂದ್ರ-ವಿರೋಧ ಪಕ್ಷದ ನಡುವೆ ಬಿಗ್ ಫೈಟ್
ಮಹಿಳಾ ಕೋಟಾ ಕಾನೂನು ಮತ್ತು ವಿವಾದಾತ್ಮಕ ಸೀಮಾ ನಿರ್ಣಯವನ್ನು ಜಾರಿಗೆ ತರುವ ನಿಬಂಧನೆಗಳನ್ನು ಒಳಗೊಂಡಿರುವ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಯ ಚರ್ಚೆಯೊಂದಿಗೆ ಸಂಸತ್ತಿನಲ್ಲಿ ಅಧಿವೇಶನ ಆರಂಭವಾಗಲಿದ್ದು, ಈ ಕುರಿತು ಕೇಂದ್ರ ಮತ್ತು ವಿರೋಧ ಪಕ್ಷದ ನಡುವೆ ಹಣಾಹಣಿ ನಡೆಯಲಿದೆ.
ವಿಶೇಷ ಅಧಿವೇಶನದ ಮುನ್ನಾದಿನ, ಹಿರಿಯ ವಿರೋಧ ಪಕ್ಷದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ಇಂಡಿಯಾ ಬ್ಲಾಕ್ ನಾಯಕರು ಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಖರ್ಗೆ, ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ತಾತ್ವಿಕವಾಗಿ ಬೆಂಬಲಿಸುತ್ತವೆಯೇ ಹೊರತು, ಸರ್ಕಾರ ಈ ಮಸೂದೆಯನ್ನು ಮಂಡಿಸಿದ ಅಸಂವಿಧಾನಿಕ ವಿಧಾನವನ್ನು ಬಲವಾಗಿ ವಿರೋಧಿಸುತ್ತವೆ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಈ ನಡೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದ್ದು, ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದರು.
ನಾವೆಲ್ಲರೂ ಮಹಿಳಾ ಮೀಸಲಾತಿ ಮಸೂದೆಯ ಪರವಾಗಿದ್ದೇವೆ, ಆದರೆ ಅದನ್ನು ತಂದಿರುವ ರೀತಿಯಲ್ಲಿ ನಮಗೆ ಆಕ್ಷೇಪಗಳಿವೆ. ಮಹಿಳಾ ಮೀಸಲಾತಿಯನ್ನು ನಾವು ನಿರಂತರವಾಗಿ ಬೆಂಬಲಿಸಿದ್ದರೂ, ಸರ್ಕಾರವು ಡಿಲಿಮಿಟೇಶನ್ (ಕ್ಷೇತ್ರ ಪುನರ್ವಿಂಗಡಣೆ) ಹೆಸರಿನಲ್ಲಿ ಹೊಸ ತಂತ್ರಗಳನ್ನು ಹೂಡುತ್ತಿದೆ. ಸಂವಿಧಾನವು ಸಂಸತ್ತಿಗೆ ನೀಡಿರುವ ಅಧಿಕಾರಗಳನ್ನು ಕಾರ್ಯಾಂಗವು ತನ್ನದಾಗಿಸಿಕೊಳ್ಳುತ್ತಿದೆ ಎಂದರು.
ಈ ಮೂರು ದಿನಗಳ ವಿಶೇಷ ಅಧಿವೇಶನವು 2029 ರ ಲೋಕಸಭಾ ಚುನಾವಣೆಯಿಂದ ಶೇ. 33 ರಷ್ಟು ಮೀಸಲಾತಿ ಜಾರಿಗೊಳಿಸುವ ಗುರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ರಾಷ್ಟ್ರದ ಭಾವನೆ ಎಂದು ಕರೆದಿದ್ದು, ಈ ಮಸೂದೆಯು ಅಂತಿಮವಾಗಿ ಕಾನೂನಾಗಿ ರೂಪುಗೊಳ್ಳುವ ಹಾದಿಯಲ್ಲಿ ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಚರ್ಚೆಗೆ ವೇದಿಕೆ ಸಜ್ಜಾಗಿದ್ದು, ಅಧಿವೇಶನದಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವಂತೆ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮನವಿ ಮಾಡಿದ್ದಾರೆ (ಏಜೆನ್ಸೀಸ್).