ಬಂಗಾಳ ಅಸೆಂಬ್ಲಿಯಲ್ಲಿ ಹಿಸ್ಟಾರಿಕ್ ಬಿಲ್ ಪಾಸ್: OBC ಪಟ್ಟಿಯಿಂದ 77 ಮುಸ್ಲಿಂ ಸಮುದಾಯಗಳು ಹೊರಕ್ಕೆ; ಮೀಸಲಾತಿ ಪ್ರಮಾಣ ಶೇ. 7 ಕ್ಕೆ ಕಡಿತ!
ಕೋಲ್ಕತಾ: ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ರಾಜ್ಯದ ಮೀಸಲಾತಿ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಹಾಗೂ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಕೊಲ್ಕತಾ ಹೈಕೋರ್ಟ್‌ನ ಆದೇಶದನ್ವಯ, ಇತರ ಹಿಂದುಳಿದ ವರ್ಗಗಳ (OBC Reservation Bill) ಮೀಸಲಾತಿ ಕಾನೂನುಗಳಿಗೆ ತಿದ್ದುಪಡಿ ತಂದಿರುವ ಸರ್ಕಾರ, ಹಿಂದಿನ ಟಿಎಂಸಿ ಸರ್ಕಾರ ಅಕ್ರಮವಾಗಿ ಸೇರಿಸಿದ್ದ 77 ಮುಸ್ಲಿಂ ಸಮುದಾಯಗಳನ್ನು ಒಬಿಸಿ ಪಟ್ಟಿಯಿಂದ ಅಧಿಕೃತವಾಗಿ ತೆಗೆದುಹಾಕಿದೆ.
ಇದರೊಂದಿಗೆ, ರಾಜ್ಯದಲ್ಲಿ ಒಬಿಸಿ ವರ್ಗಕ್ಕಿದ್ದ ಮೀಸಲಾತಿ ಪ್ರಮಾಣವನ್ನು ಶೇ.10 ರಿಂದ ಶೇ.7 ಕ್ಕೆ ಕಡಿತಗೊಳಿಸಲಾಗಿದೆ. ಸೋಮವಾರ ನಡೆದ ವಿಧಾನಸಭಾ ಕಲಾಪದಲ್ಲಿ ಈ ತಿದ್ದುಪಡಿ ವಿಧೇಯಕಗಳ ಪರವಾಗಿ ಭರ್ಜರಿ 186 ಶಾಸಕರು ಮತ ಚಲಾಯಿಸಿದರೆ, ಕೇವಲ 17 ಶಾಸಕರು ಮಾತ್ರ ವಿರುದ್ಧವಾಗಿ ಮತ ಹಾಕಿದರು. ಬಹುಮತದೊಂದಿಗೆ ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ತಿದ್ದುಪಡಿ ವಿಧೇಯಕ-2026 ಸದನದಲ್ಲಿ ಅಂಗೀಕಾರಗೊಂಡಿದೆ.
ಮುಸ್ಲಿಮರ ಓಲೈಕೆಗೆ ಮಾಡಿದ್ದ ತಂತ್ರ" - ಸಚಿವ ಗೌರಿಶಂಕರ್ ಘೋಷ್
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಗೌರಿಶಂಕರ್ ಘೋಷ್ ಅವರು ಈ ವಿಧೇಯಕವನ್ನು ಮಂಡಿಸಿ ಮಾತನಾಡಿದ್ದಾರೆ. ಹಿಂದಿನ ಮಮತಾ ನೇತೃತ್ವದ ಸರ್ಕಾರವು ಯಾವುದೇ ವ್ಯವಸ್ಥಿತ ಸಮೀಕ್ಷೆ ನಡೆಸದೇ, ಕೇವಲ ಮುಸ್ಲಿಂ ಸಮುದಾಯಕ್ಕೆ ಅನುಚಿತ ಲಾಭ ಮಾಡಿಕೊಡುವ ಮತ್ತು ಓಟ್‌ಬ್ಯಾಂಕ್ ರಾಜಕೀಯ ಮಾಡುವ ಉದ್ದೇಶದಿಂದ ಹತ್ತಾರು ಮುಸ್ಲಿಂ ಸಮುದಾಯಗಳನ್ನು ಒಬಿಸಿ ಪಟ್ಟಿಗೆ ತುರುಕಿತ್ತು. ಹೈಕೋರ್ಟ್ ನಿರ್ದೇಶನದಂತೆ ಅಂತಹ ಎಲ್ಲಾ ಅಕ್ರಮ ಸಮುದಾಯಗಳನ್ನು ಕೈಬಿಡಲಾಗಿದ್ದು, ಕಾನೂನುಬದ್ಧ ಸಮೀಕ್ಷೆ ಎದುರಿಸಿದ್ದ ಕೇವಲ 66 ಸಮುದಾಯಗಳನ್ನು ಮಾತ್ರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಆಡಳಿತದಲ್ಲಿ ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು ಮತ್ತು ನಕಲಿ ಒಬಿಸಿ ಪ್ರಮಾಣಪತ್ರಗಳ ಹಾವಳಿ ಮಿತಿಮೀರಿತ್ತು. ಇನ್ಮುಂದೆ ಇಂತಹ ಅಕ್ರಮಗಳಿಗೆ ಆಸ್ಪದವಿಲ್ಲ. ನೂತನ ಆಯೋಗವು ರಾಜ್ಯದ ಒಬಿಸಿಗಳ ನೈಜ ಸ್ಥಿತಿಗತಿಯ ಬಗ್ಗೆ ಹೊಸದಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಯಾವ ಸಮುದಾಯಗಳು ಇವೆ? ಯಾವುವು ಔಟ್?
ಹೈಕೋರ್ಟ್ ಆದೇಶದ ಬೆನ್ನಲ್ಲೇ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರವು ಈ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ನೂತನ ಒಬಿಸಿ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿರುವ ಪ್ರಮುಖ ಮುಸ್ಲಿಂ ಸಮುದಾಯಗಳೆಂದರೆ ಜೂಲಾ (ಅನ್ಸಾರಿ ಮೋಮಿನ್), ಫಕೀರ್, ಪಹಾಡಿಯಾ ಮುಸ್ಲಿಂ, ಹಜ್ಜಾಮ್ ಮತ್ತು ಚೌಧುಲಿ ಮುಸ್ಲಿಂ.
ಮತ್ತೊಂದೆಡೆ ಪಟ್ಟಿಯಿಂದ ಹೊರಬಿದ್ದಿರುವ 77 ಸಮುದಾಯಗಳಲ್ಲಿ ಮುಸ್ಲಿಂ ನೆಹಾರಿಯಾ, ಮುಸ್ಲಿಂ ಹಲ್ದಾರ್, ಮುಸ್ಲಿಂ ಸಾಂಪುಯಿ, ಮುಸ್ಲಿಂ ಮಾಲಿ, ಘೋಷಿ (ಮುಸ್ಲಿಂ), ಮುಸ್ಲಿಂ ದರ್ಜಿ/ ಇದ್ರಿಸಿ, ಮುಸ್ಲಿಂ ರಾಜ್‌ಮಿಸ್ತ್ರಿ, ಮುಸ್ಲಿಂ ಬತಿಯಾರಾ ಮತ್ತು ಮುಸ್ಲಿಂ ಮೊಲ್ಲಾ ಸೇರಿದಂತೆ ಹಲವು ಪ್ರಮುಖ ಜಾತಿಗಳು ಸೇರಿವೆ.
ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದ ಹಿನ್ನೆಲೆ
2011ರಲ್ಲಿ ಟಿಎಂಸಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಮುಸ್ಲಿಂ ಸಮುದಾಯಗಳನ್ನು ಒಬಿಸಿ ಪಟ್ಟಿಗೆ ಸೇರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಾನವ ಹಕ್ಕುಗಳ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದವು. ಮೇ 2024ರಲ್ಲಿ ತೀರ್ಪು ನೀಡಿದ್ದ ಕಲ್ಕತ್ತಾ ಹೈಕೋರ್ಟ್‌ನ ದ್ವಿಸದಸ್ಯ ಪೀಠವು, ಮುಸ್ಲಿಂ ಸಮುದಾಯದ 77 ಜಾತಿಗಳನ್ನು ಒಬಿಸಿ ಎಂದು ಘೋಷಿಸಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಕೇವಲ ಚುನಾವಣಾ ಲಾಭಕ್ಕಾಗಿ ಮತ್ತು ಓಟ್‌ಬ್ಯಾಂಕ್‌ಗಾಗಿ ಮುಸ್ಲಿಮರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗಿದೆ. ಇಂತಹ ನಡೆ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರೋಧವಾದುದು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಹಿಂದಿನ ಎಡರಂಗದ ಬುದ್ಧದೇವ್ ಭಟ್ಟಾಚಾರ್ಯ ಸರ್ಕಾರವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಒಬಿಸಿ-ಎ ಅಡಿಯಲ್ಲಿ ಶೇ. 10 ರಷ್ಟು ಮತ್ತು ಒಬಿಸಿ-ಬಿ ಅಡಿಯಲ್ಲಿ ಶೇ. 7 ರಷ್ಟು ಮೀಸಲಾತಿ ನೀಡಿತ್ತು. ಆದರೆ ಮಮತಾ ಅವರು ನಿಯಮಾವಳಿಗಳನ್ನು ಗಾಳಿಗೆ ತೂರಿ ಹೆಚ್ಚಿನ ಜಾತಿಗಳನ್ನು ಸೇರಿಸಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 294 ಸೀಟುಗಳ ಪೈಕಿ 207 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು, ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಬಂಗಾಳದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ,(ಏಜೆನ್ಸೀಸ್).