Shashi Tharoor | ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಸಂಸದ ತರೂರ್ ಫಿದಾ
ದೆಹಲಿ: ಮಾಜಿ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಲಾಗಿದ್ದು, ಈ ಕ್ರಮವನ್ನು ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್(Shashi Tharoor) ಸ್ವಾಗತಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದ ತರೂರ್, ರಾಜಾಜಿಯವರ ಉದಾರವಾದಿ ಮತ್ತು ಸಾಂವಿಧಾನಿಕ ಮೌಲ್ಯಗಳು ಪ್ರಸ್ತುತವಾಗಿದ್ದು, ಆದರೆ ಅವುಗಳನ್ನು ಅನುಸರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ರಾಜಾಜಿ ಉತ್ಸವವನ್ನು ಸೋಮವಾರ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಈ ಹೇಳಿಕೆ ಹೊರಬಿದ್ದಿರುವುದು ಗಮನಾರ್ಹ ಸಂಗತಿ.
ಇಂದು ನಾವು ರಾಜಾಜಿಯವರ ಪ್ರತಿಮೆಯನ್ನು ಪೂಜಿಸುತ್ತಿದ್ದೇವೆ, ಆದರೆ ಅವರ ಸಾಂವಿಧಾನಿಕ ಸಿದ್ಧಾಂತಗಳನ್ನು ಅನುಸರಿಸುವವರು ಬಹಳ ಕಡಿಮೆ ಜನರಿದ್ದಾರೆ. ನಮ್ಮ ರಾಜಕೀಯ ಚರ್ಚೆಗಳಲ್ಲಿ ತರ್ಕ ಮತ್ತು ಉದಾರವಾದದ ಬದಲು ಧ್ರುವೀಕರಣ ಕಾಣಿಸಿಕೊಳ್ಳುತ್ತಿದೆ ಎಂಬುದು ತರೂರ್ ಅಭಿಪ್ರಾಯವಾಗಿದೆ.
ಇತಿಹಾಸದ ಮರುಸ್ಥಾಪನೆ
ರಾಷ್ಟ್ರಪತಿ ಭವನವು ಭಾರತದ ಪ್ರಜಾಪ್ರಭುತ್ವದ ಸರ್ವೋಚ್ಚ ಸಂಕೇತ. ಅಲ್ಲಿ ರಾಜಾಜಿಯವರ ಪ್ರತಿಮೆಯನ್ನು ಸ್ಥಾಪಿಸಿರುವುದು ಕೇವಲ ಒಂದು ಸಂಪ್ರದಾಯವಲ್ಲ, ಬದಲಿಗೆ ಭಾರತದ ಬೌದ್ಧಿಕ ಇತಿಹಾಸಕ್ಕೆ ನೀಡಿದ ಗೌರವ ಎಂದು ಪರಿಗಣಿಸಲಾಗಿದೆ. ಇದು ತುಂಬಾ ಹಿಂದೆಯೇ ನಡೆಯಬೇಕಿದ್ದ ಕೆಲಸ, ಆದರೆ ಕಾಲ ಈಗ ಕೂಡಿ ಬಂದಿದೆ, ದೇಶದ ರಾಜಕೀಯ ಇತಿಹಾಸದಲ್ಲಿ ರಾಜಾಜಿಯವರ ಸ್ಥಾನ ಅತ್ಯಂತ ವಿಶಿಷ್ಟವಾದುದು ಎಂದಿದ್ದಾರೆ.
ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂರ ಆರ್ಥಿಕ ನೀತಿಗಳನ್ನು ವಿರೋಧಿಸಿ 'ಸ್ವರಾಜ್ಯ ಪಕ್ಷ' ಕಟ್ಟಿದ ರಾಜಾಜಿ, ವಿರೋಧ ಪಕ್ಷದ ಧ್ವನಿ ಎಷ್ಟು ಪ್ರಬಲವಾಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದರು. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷದ ಮಾತುಗಳನ್ನು ಆಲಿಸುವ ಸೌಜನ್ಯ ಬೇಕು ಎಂದು ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಈ ವಿಷಯದಲ್ಲಿ ಎಳೆದು ತಂದರು.
ತಮ್ಮ ವಿದ್ಯಾರ್ಥಿ ವರ್ಷಗಳಲ್ಲಿ ರಾಜಾಜಿಯವರ ಸ್ವತಂತ್ರ ಪಕ್ಷವನ್ನು ಬೆಂಬಲಿಸಿದ್ದನ್ನು ತರೂರ್ ನೆನಪಿಸಿಕೊಂಡಿದ್ದು, ನಾಯಕನ ಸೈದ್ಧಾಂತಿಕ ಚೌಕಟ್ಟು, ಉದಾರವಾದಿ ಅರ್ಥಶಾಸ್ತ್ರ ಮತ್ತು ಮುಕ್ತ ಉದ್ಯಮವನ್ನು ಸಾಮಾಜಿಕ ನ್ಯಾಯದೊಂದಿಗೆ ಸಂಯೋಜಿಸುವುದು, ಕೋಮು ಪಕ್ಷಪಾತವಿಲ್ಲದ ಬಲವಾದ ನಾಗರಿಕತೆಯ ಬೇರುಗಳು ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಗಳಿಗೆ ಅಚಲವಾದ ಬದ್ಧತೆ ಅವರ ಸ್ವಂತ ನಂಬಿಕೆಗಳನ್ನು ರೂಪಿಸುತ್ತಲೇ ಇತ್ತು ಎಂದು ಹೇಳಿದರು(ಏಜೆನ್ಸೀಸ್).