ಇನ್ಸ್ಟಾಗ್ರಾಂ ಲೈವ್ ಬಂದ ತೆಲಂಗಾಣ ಲೇಡಿ ಪೊಲೀಸ್
- ಕೆಲಸ ಮಾಡೋದನ್ನು ಬಿಟ್ಟು ಡ್ಯೂಟಿ ಟೈಂನಲ್ಲಿ ಇನ್ಸ್ಟಾಗ್ರಾಂ ಲೈವ್ ಬಂದ ಲೇಡಿ ಪೊಲೀಸ್
- ತೆಲಂಗಾಣದ ಯಾದ್ರಾದ್ರಿ ಭುವನಗಿರಿ ಜಿಲ್ಲೆಯ ಮಹಿಳಾ ಕಾನ್ಸ್ಟೆಬಲ್ಗಳಿಂದ ಹೊಸ ವಿವಾದ
- ಲೇಡಿ ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆಯ ಜತೆಗೆ ಆಕ್ರೋಶ ಹೊರಹಾಕಿದ ನೆಟ್ಟಿಗರು
ಹೈದರಾಬಾದ್: ಕೆಲಸ ಮಾಡೋದನ್ನು ಬಿಟ್ಟು ಡ್ಯೂಟಿ ಟೈಂನಲ್ಲಿ ಇನ್ಸ್ಟಾಗ್ರಾಂ ಲೈವ್ ( Insta Live ) ನಲ್ಲಿ ಬಂದು ಹರಟೆ ಹೊಡೆಯುವ ಮೂಲಕ ತೆಲಂಗಾಣದ ಯಾದ್ರಾದ್ರಿ ಭುವನಗಿರಿ ಜಿಲ್ಲೆಯ ಮಹಿಳಾ ಕಾನ್ಸ್ಟೆಬಲ್ಗಳು ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಕರ್ತವ್ಯದಲ್ಲಿರುವಾಗ ನಿಯಮಗಳನ್ನು ಗಾಳಿ ತೂರಿ ಅನುಚಿತವಾಗಿ ವರ್ತಿಸಿರುವ ಲೇಡಿ ಪೊಲೀಸರ ವಿರುದ್ಧ ಮೇಲಧಿಕಾರಿಗಳು ಗರಂ ಆಗಿದ್ದಾರೆ.
ಯಾದದ್ರಿ ಭುವನಗಿರಿ ಜಿಲ್ಲೆಯ ಆತ್ಮಕೂರು (ಎಂ) ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಪ್ರೇಮಲತಾ ಎಂಬ ಮಹಿಳೆ ಈ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ. ತಮ್ಮ ಠಾಣೆಗೆ ಆಗಮಿಸುವ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಪೊಲೀಸರು, ತಮ್ಮ ಕರ್ತವ್ಯದ ಸಮಯದಲ್ಲಿ ಸಾಮಾಜಿಕ ಜಾಲತಾಣಕ್ಕೆ ವ್ಯಸನಿಯಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
ಪೊಲೀಸ್ ಠಾಣೆಯಲ್ಲಿ ಅದು ಕೂಡ ಸಮವಸ್ತ್ರದಲ್ಲೇ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇದು ಇಷ್ಟಕ್ಕೆ ನಿಲ್ಲದೇ ತಮ್ಮ ಕರ್ತವ್ಯದ ಸಮಯದಲ್ಲಿ ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದು ನೆಟ್ಟಿಗರೊಂದಿಗೆ ಪ್ರೇಮಲತಾ ಸಂವಹನ ನಡೆಸಿದ್ದಾರೆ. ಲೈವ್ ವೀಕ್ಷಣೆ ಮಾಡುತ್ತಿದ್ದವರು ಲೇಡಿ ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆಯ ಜತೆಗೆ ಆಕ್ರೋಶದ ಕಾಮೆಂಟ್ಗಳನ್ನು ಮಾಡಿದ್ದಾರೆ.
ಕರ್ತವ್ಯದ ಸಮಯದಲ್ಲಿ ಇನ್ಸ್ಟಾಗ್ರಾಂ ಲೈವ್ ಬರುವುದು ಅಂದರೆ ಏನು ಅರ್ಥ? ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ಸಾಹದಿಂದಲೇ ಉತ್ತರ ನೀಡಿದ ಲೇಡಿ ಪೊಲೀಸ್, ಇದು ಸ್ನೇಹಪರ ಪೊಲೀಸ್ ಠಾಣೆ, ನಮಗಿಲ್ಲಿ ಹೆಚ್ಚಿನ ಕೆಲಸವಿಲ್ಲ. ಅದಕ್ಕಾಗಿಯೇ ನಾನು ಇನ್ಸ್ಟಾಗ್ರಾಂ ಲೈವ್‌ಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಿಜಕ್ಕೂ ನಿಮ್ಮ ನಡೆ ಪೊಲೀಸ್ ಇಲಾಖೆಯ ಖ್ಯಾತಿಗೆ ಕಳಂಕ ತಂದಿದೆ. ಜವಾಬ್ದಾರಿಯುತ ಹುದ್ದೆಯಲ್ಲಿದ್ದಾಗ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸದೆ ನೀವು ತೋರುತ್ತಿರುವ ವರ್ತನೆಗಳನ್ನು ಸರಿಯಲ್ಲ ಎಂಬ ಟೀಕೆಗಳು ಹರಿದುಬಂದಿವೆ.
ಇನ್ನು ಈ ಲೈವ್ ವಿಡಿಯೋ ವೈರಲ್ ಆಗಿ ಉನ್ನತ ಅಧಿಕಾರಿಗಳ ಗಮನಕ್ಕೂ ಬಂದಿದೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಆಡಳಿತ ಗಂಭೀರವಾಗಿ ಪರಿಗಣಿಸಿದೆ. ಕರ್ತವ್ಯದ ಸಮಯದಲ್ಲಿ ನಿಯಮಗಳಿಗೆ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿದ್ದರಿಂದ ಪ್ರೇಮಲತಾ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಕೂಡ ಒತ್ತಾಯಿಸುತ್ತಿದ್ದಾರೆ, (ಏಜೆನ್ಸೀಸ್).