RSS ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ
ವಾಷಿಂಗ್ಟನ್: ಹಿಂದೂ ಎನ್ನುವುದು ಧಾರ್ಮಿಕ ಗುರುತಲ್ಲ, ಅದೊಂದು ನಾಗರಿಕತೆ ಎಂದು ಶುಕ್ರವಾರ(ಏ. 24) ಅಮೆರಿಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿಯ ಹಡ್ಸನ್ ಇನ್ಸ್ಟಿಟ್ಯೂಟ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿರುವ ಅವರು, ಹಿಂದೂ ಪ್ರಾಬಲ್ಯದ ಆರೋಪಗಳನ್ನು ತಿರಸ್ಕರಿಸಿದ್ದು, ಆರ್‌ಎಸ್‌ಎಸ್‌ನ ದೃಷ್ಟಿಯಲ್ಲಿ ಹಿಂದೂ ಎನ್ನುವ ಗುರುತು ಧಾರ್ಮಿಕ ಗುರುತು ಅಲ್ಲ, ಅದು ನಾಗರಿಕತೆಯ ಗುರುತು ಎಂದು ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್‌ನ ಕಾರ್ಯವೈಖರಿಯ ಬಗ್ಗೆ ಮಾತನಾಡಿರುವ ಅವರು, ಆರ್‌ಎಸ್‌ಎಸ್ ಎಂಬುದು ಪ್ರಾಚೀನ ಭಾರತೀಯ ಸಮಾಜದ ಸಾಂಸ್ಕೃತಿಕ ನೀತಿ ಮತ್ತು ನಾಗರಿಕತೆಯ ಮೌಲ್ಯಗಳಿಂದ ಪ್ರೇರಿತವಾದ ಜನರ ಸ್ವಯಂಸೇವಾ ಚಳುವಳಿಯಾಗಿದೆ. ಇದನ್ನು ಸಾಮಾನ್ಯವಾಗಿ ಹಿಂದೂ ಸಂಸ್ಕೃತಿ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಸಮಾಜದ ಸುಧಾರಣೆ ಮತ್ತು ರಾಷ್ಟ್ರದ ಏಕತೆಯ ಉದ್ದೇಶಕ್ಕಾಗಿ ಕೆಲಸ ಮಾಡುತ್ತದೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಪರಿಹಾರ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಯಾವಾಗಲೂ ಸಾಂಸ್ಕೃತಿಕ ನೀತಿ ಮತ್ತು ನಾಗರಿಕ ಮೌಲ್ಯಗಳನ್ನು ಒತ್ತಿಹೇಳಿದೆ. ಅವು ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಅಮೆರಿಕದ ಬಿಳಿ ಪ್ರಾಬಲ್ಯವಾದಿ ಗುಂಪು ಕು ಕ್ಲುಕ್ಸ್ ಕ್ಲಾನ್‌ನಂತಲ್ಲ, ಯಾಕೆಂದರೆ ಈ ಸಂಘಟನೆಯಾಗಲಿ ಅಥವಾ ಭಾರತದಲ್ಲಿನ ಹಿಂದೂಗಳಾಗಲಿ ಎಂದಿಗೂ ಪ್ರಾಬಲ್ಯವಾದಿ ಸಿದ್ಧಾಂತಗಳಿಗೆ ಚಂದಾದಾರರಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಭಾರತದ ಬಗೆಗಿನ ಅಮೆರಿಕದ ಗ್ರಹಿಕೆಯನ್ನು ಅಲ್ಲಗೆಳೆದಿರುವ ಹೊಸಬಾಳೆ, ಭಾರತ ಜನನಿಬಿಡ, ಹಾವುಗಳು, ಕೊಳೆಗೇರಿಗಳು ಹಾಗೂ ಸ್ವಾಮಿಗಳ ನಾಡು ಎಂಬ ತಪ್ಪು ಕಲ್ಪನೆಯನ್ನು ಅಮೆರಿಕ ಹೊಂದಿದೆ. ಭಾರತ ತಂತ್ರಜ್ಞಾನ ಕೇಂದ್ರವೂ ಆಗಿದೆ. ಭಾರತೀಯ ವಿಜ್ಞಾನಿಗಳು ಚಂದ್ರನನ್ನು ತಲುಪಿದ್ದಾರೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈ ವಿಷಯಗಳು ಅಮೆರಿಕದ ಸಾಮಾನ್ಯ ಗ್ರಹಿಕೆಗಳಲ್ಲಿ ಇವುಗಳು ಕಂಡಿಲ್ಲ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆಯೂ ಇದೇ ರೀತಿ ತಿಳಿದೋ ಅಥವಾ ತಿಳಿಯದೆಯೋ, ಅದನ್ನು ಹಿಂದೂ ಶ್ರೇಷ್ಠತಾವಾದಿ ಸಂಘಟನೆ, ಕ್ರಿಶ್ಚಿಯನ್ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಮಹಿಳೆಯರ ಅಭಿವೃದ್ಧಿ ವಿರೋಧಿ ಹಾಗೂ ಆಧುನೀಕರಣ ವಿರೋಧಿ ಎಂಬ ಪಟ್ಟವನ್ನು ಕಟ್ಟಲಾಗಿದೆ. ಆದರೆ ನಾವು ಅದ್ಯಾವೂದರ ವಿರೋಧಿಗಳಲ್ಲ ಎಂದಿದ್ದಾರೆ (ಏಜೆನ್ಸೀಸ್).