ತಮಿಳುನಾಡಿನಲ್ಲಿ ಹಿಂದಿಗೆ ಎಂದಿಗೂ ಜಾಗವಿಲ್ಲ: ಭಾಷಾ ಹುತಾತ್ಮರ ದಿನದಂದು ಎಂ.ಕೆ. ಸ್ಟಾಲಿನ್ ಗುಡುಗು 
ದೇಶ

ತಮಿಳುನಾಡಿನಲ್ಲಿ ಹಿಂದಿಗೆ ಎಂದಿಗೂ ಜಾಗವಿಲ್ಲ: ಭಾಷಾ ಹುತಾತ್ಮರ ದಿನದಂದು ಎಂ.ಕೆ. ಸ್ಟಾಲಿನ್ ಗುಡುಗು | M.K Stalin

ಚೆನ್ನೈ: ತಮಿಳುನಾಡಿನ ಮಣ್ಣಿನಲ್ಲಿ ಅಂದೂ, ಇಂದೂ ಮತ್ತು ಎಂದೆಂದಿಗೂ ಹಿಂದಿ ಭಾಷೆಗೆ ಸ್ಥಾನವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್(M.K Stalin) ಭಾನುವಾರ (ಜ.25) ಸ್ಪಷ್ಟಪಡಿಸಿದ್ದಾರೆ.
ಭಾಷಾ ಹುತಾತ್ಮರ ದಿನದ ಅಂಗವಾಗಿ ತಮಿಳು ಭಾಷೆಯ ಉಳಿವಿಗಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿದ ಸ್ಟಾಲಿನ್​, ಕೇಂದ್ರದ ಹಿಂದಿ ಹೇರಿಕೆ ನೀತಿಯ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್​, ತಮಿಳುನಾಡು ತನ್ನ ಭಾಷೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತದೆ ಎಂದು ಬಣ್ಣಿಸಿದ್ದಾರೆ. ತನ್ನ ಭಾಷೆಯನ್ನು ಉಸಿರಿಗಿಂತ ಹೆಚ್ಚಾಗಿ ಪ್ರೀತಿಸುವ ಈ ರಾಜ್ಯವು, ಹಿಂದಿ ಹೇರಿಕೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದೆ. ಪ್ರತಿ ಬಾರಿ ಹಿಂದಿಯನ್ನು ಬಲವಂತವಾಗಿ ಹೇರಲು ಪ್ರಯತ್ನಿಸಿದಾಗಲೂ ಅಷ್ಟೇ ತೀವ್ರತೆಯಿಂದ ನಾವು ಪ್ರತಿಭಟಿಸಿದ್ದೇವೆ ಎಂದು ಹೇಳಿದ್ದಾರೆ.
ಭಾಷಾ ಹುತಾತ್ಮರಿಗೆ ಗೌರವ
ಹಿಂದಿ ವಿರೋಧಿ ಚಳವಳಿಯ ಸಮಯದಲ್ಲಿ ತಮಿಳು ಭಾಷೆಯ ಘನತೆಯನ್ನು ಎತ್ತಿಹಿಡಿಯಲು ತಮ್ಮ ಪ್ರಾಣವನ್ನೇ ಅರ್ಪಿಸಿದ ಭಾಷಾ ಹುತಾತ್ಮರ ತ್ಯಾಗವನ್ನು ಸ್ಟಾಲಿನ್ ಸ್ಮರಿಸಿದ್ದಾರೆ. ಈ ಹೋರಾಟಗಾರರ ಬಲಿದಾನವೇ ಇಂದು ತಮಿಳು ಭಾಷೆಯ ಅಸ್ಮಿತೆಯನ್ನು ಕಾಪಾಡಿದೆ ಎಂದು ಸ್ಟಾಲಿನ್​ ಅಭಿಪ್ರಾಯಪಟ್ಟಿದ್ದಾರೆ.

ದ್ರಾವಿಡ ರಾಜಕಾರಣದ ಸಿದ್ಧಾಂತ

ಡಿಎಂಕೆ ಪಕ್ಷವು ಮೊದಲಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬಂದಿದೆ. ಈ ಬಾರಿ ಸ್ಟಾಲಿನ್ ಅವರ ಹೇಳಿಕೆಯು ಕೇಂದ್ರ ಸರ್ಕಾರದ ಶಿಕ್ಷಣ ನೀತಿ ಮತ್ತು ಆಡಳಿತದಲ್ಲಿ ಹಿಂದಿ ಬಳಕೆಯ ಹೆಚ್ಚಳದ ವಿರುದ್ಧದ ನೇರ ಎಚ್ಚರಿಕೆಯೆಂದು ವಿಶ್ಲೇಷಿಸಲಾಗುತ್ತಿದೆ. ತಮಿಳು ನೆಲದಲ್ಲಿ ತಮಿಳಿಗೆ ಮೊದಲ ಆದ್ಯತೆ, ಬೇರೆ ಭಾಷೆಯ ಬಲವಂತದ ಹೇರಿಕೆಗೆ ಇಲ್ಲಿ ಅವಕಾಶವೇ ಇಲ್ಲ ಎಂಬ ದ್ರಾವಿಡ ಸಿದ್ಧಾಂತವನ್ನು ತಮಿಳುನಾಡಿನ ಸಿಎಂ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ರಾಜಕೀಯ ಸಂಚಲನ

ಸ್ಟಾಲಿನ್​ರ ಈ ಖಡಕ್ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ಭಾಷಾ ರಾಜಕಾರಣದ ಕಿಚ್ಚನ್ನು ಹಚ್ಚಿದೆ. ದಕ್ಷಿಣ ಭಾರತದ ಇತರ ರಾಜ್ಯಗಳಲ್ಲೂ ಭಾಷಾ ಅಸ್ಮಿತೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ತಮಿಳುನಾಡು ಮುಖ್ಯಮಂತ್ರಿಯ ಈ ನಿಲುವು ಮಹತ್ವ ಪಡೆದುಕೊಂಡಿದೆ,(ಏಜೆನ್ಸೀಸ್).