ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದೆ ಕನಿಮೋಳಿ 
ದೇಶ

ಸ್ವತಂ ಅವರೇ ಕುಟುಂಬ ರಾಜಕಾರಣದಿಂದ ಬಂದವರು; ವಂಶಪಾರಂಪರ್ಯ ರಾಜಕಾರಣ ಟೀಕಿಸಿದ ಪಿಯೂಷ್​​ ಗೊಯಲ್​ಗೆ ಕನಿಮೋಳಿ ತಿರುಗೇಟು | Kanimozhi

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ರಂಗೇರಿದ್ದು, ಡಿಎಂಕೆಯ ವಂಶಪಾರಂಪರ್ಯ ರಾಜಕಾರಣವನ್ನು ಟೀಕಿಸಿದ್ದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್​ ಗೊಯಲ್​ಗೆ ಸಂಸದೆ ಕನಿಮೋಳಿ(Kanimozhi) ತಿರುಗೇಟು ನೀಡಿದ್ದು, ಸ್ವತಃ ಅವರೇ ಕುಟುಂಬ ರಾಜಕಾರಣದಿಂದ ಬಂದವರು ಎಂದು ವಾಗ್ದಾಳಿ ನಡೆಸಿದ್ದಾರೆ.
ದಿಂಡಿಗಲ್​ನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಪಿಟಿಐ ಜೊತೆ ಮಾತನಾಡಿರುವ ಅವರು, ಸ್ವತಃ ಪಿಯೂಷ್ ಗೋಯಲ್ ಅವರೇ ವಂಶಪಾರಂಪರ್ಯ ರಾಜಕಾರಣದಿಂದ ಬಂದವರು. ಅವರು ಅದರ ಕುರಿತು ಮಾತನಾಡುವ ಅವಶ್ಯಕತೆ ಇಲ್ಲ. ಬಿಜೆಪಿಯಲ್ಲೂ ಹಲವು ನಾಯಕರು ರಾಜಕೀಯ ಕುಟುಂಬದಿಂದ ಬಂದಿದ್ದಾರೆ. ಪ್ರಧಾನಿ ಬರದೇ ಇರಬಹುದು. ಆದರೆ ಬಿಜೆಪಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರು ಈ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ.
ಡಿಎಂಕೆ ನಾಯಕರು ಚುನಾವಣೆ ಮೂಲಕ ಜನರಿಂದ ಆಯ್ಕೆಯಾಗಿದ್ದಾರೆ. ಕೇವಲ ವಂಶಾವಳಿಯಿಂದ ರಾಜಕಾರಣ ಮಾಡ್ತಿಲ್ಲ ಎಂದ ಅವರು, ಬಿಜೆಪಿ ಒಂದು ರೀತಿಯ ವಾಷಿಂಗ್ ಮಿಷನ್ ಇದ್ದಂತೆ. ನೀವು ಅವರೊಂದಿಗೆ ಮೈತ್ರಿ ಮಾಡಿಕೊಂಡ ತಕ್ಷಣ, ಬಿಜೆಪಿ ಸೇರಿದ ಬಳಿಕ ನಿಮ್ಮನ್ನು ಆ ದೊಡ್ಡ ವಾಷಿಂಗ್​ ಮಿಷನ್ ಹಾಕುತ್ತಾರೆ. ಆ ಬಳಿಕ ನೀವು ಪರಿಶುದ್ಧರಾಗಿ ಹೊರಬರುತ್ತೀರಿ. ಹಾಗಾಗಿ ಬೇರೊಬ್ಬರನ್ನು ಭ್ರಷ್ಟ ಎಂದು ಕರೆಯುವ ನೈತಿಕತೆ ಬಿಜೆಪಿಗಿಲ್ಲ ಎಂದು ಕಿಡಿಕಾರಿದ್ದಾರೆ.
ಡಿಎಂಕೆಯನ್ನು ಹಿಂದೂ ವಿರೋಧಿ ಪಕ್ಷ ಎಂಬುದನ್ನು ತಳ್ಳಿ ಹಾಕಿದ ಅವರು, ರಾಜ್ಯದ ಕಲ್ಯಾಣ ಯೋಜನೆಗಳ ಬಹುಪಾಲು ಫಲಾನುಭವಿಗಳು ಹಿಂದೂಗಳು. ನಾವು ಎಲ್ಲರನ್ನೂ ಒಳಗೊಂಡ ರಾಜ್ಯ ಮತ್ತು ಆಡಳಿತದಲ್ಲಿ ನಂಬಿಕೆ ಇಡುತ್ತೇವೆ. ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು ಎಂದು ನಾವು ಭಾವಿಸುತ್ತೇವೆ. ಆದರೆ ಅದರರ್ಥ ನಾವು ಹಿಂದೂಗಳ ವಿರುದ್ಧವಾಗಿದ್ದೇವೆ ಎಂದಲ್ಲ ಎಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಡಿಎಂಕೆ ಸರ್ಕಾರ 4 ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದೆ. 7,500 ಎಕರೆ ದೇವಾಲಯದ ಭೂಮಿಯನ್ನು ಮರಳಿ ಪಡೆದುಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.
ಮಾರ್ಚ್​ 31ರಂದು ತಮಿಳುನಾಡು ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದ ಪಿಯೂಷ್ ಗೊಯಲ್, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಿಎಂಕೆ ಸರ್ಕಾರದ ವಿರುದ್ಧ ರಾಜಕೀಯ ಚಾರ್ಜ್​ಶೀಟ್ ಬಿಡುಗಡೆ ಮಾಡಿದ್ದರು. ಸಿಎಂ ಎಂ.ಕೆ.ಸ್ಟಾಲಿನ್ ವಿರುದ್ಧ ಕುಟುಂಬ ರಾಜಕಾರಣ ಮತ್ತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).