Assam Elephants (ಚಿತ್ರ X)
ಅಸ್ಸಾಂ: ರೈಲು ಹಳಿ ದಾಟುತ್ತಿದ್ದ ಬೃಹತ್ ಕಾಡಾನೆಗಳ ಹಿಂಡನ್ನು ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ವೇಗವಾಗಿ ಬರುತ್ತಿದ್ದ ರೈಲನ್ನೇ ತಡೆದು ನಿಲ್ಲಿಸಿದ ಘಟನೆ ಅಸ್ಸಾಂನ ಹೋಜೈ (Assam Elephants) ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತ ದೃಶ್ಯಾವಳಿಗಳನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಘಟನೆಯ ವಿವರ
ಹೋಜೈ ವ್ಯಾಪ್ತಿಯ ಅರಣ್ಯ ಪ್ರದೇಶದ ಬಳಿ ಇರುವ ರೈಲ್ವೆ ಹಳಿಯ ಸಮೀಪದಲ್ಲಿ ಮರಿಗಳು ಸೇರಿದಂತೆ ದೊಡ್ಡ ಆನೆಗಳ ಹಿಂಡು ಏಕಾಏಕಿ ದಟ್ಟ ರಸ್ತೆಯ ಕಡೆಯಿಂದ ಪ್ರತ್ಯಕ್ಷವಾಯಿತು. ಅದೇ ಸಮಯದಲ್ಲಿ ದೂರದಿಂದ ವೇಗವಾಗಿ ರೈಲೊಂದು ಧಾವಿಸಿ ಬರುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿ, ಹಳಿಯ ಬದಿ ನಿಂತು ರೈಲಿನ ಲೋಕೋ ಪೈಲಟ್‌ಗೆ ನಿಲ್ಲಿಸುವಂತೆ ಸಂಕೇತ ನೀಡಿದರು.
ಸಿಬ್ಬಂದಿಯ ಎಚ್ಚರಿಕೆಯನ್ನು ಗಮನಿಸಿದ ರೈಲು ಚಾಲಕ ಸುರಕ್ಷಿತವಾಗಿ ರೈಲನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ಮಧ್ಯೆ ಆನೆಗಳ ಹಿಂಡು ಒಂದರ ಹಿಂದೆ ಒಂದರಂತೆ ಯಾವ ಭೀತಿಯೂ ಇಲ್ಲದೆ ಹಳಿ ದಾಟಿ ಕಾಡಿನತ್ತ ತೆರಳಿದವು. ಸಂಪೂರ್ಣ ಹಿಂಡು ಸುರಕ್ಷಿತವಾಗಿ ದಾಟುವವರೆಗೂ ಅರಣ್ಯ ಸಿಬ್ಬಂದಿ ಜಾಗರೂಕರಾಗಿ ಪರಿಸ್ಥಿತಿಯನ್ನು ನಿಗದಿಪಡಿಸಿದರು.
ಸುರಕ್ಷಿತ ಕಾರಿಡಾರ್ ವ್ಯವಸ್ಥೆ
ಅಸ್ಸಾಂನಲ್ಲಿ ಸಾಂಪ್ರದಾಯಿಕ ಆನೆ ಕಾರಿಡಾರ್‌ಗಳ ಮೂಲಕವೇ ಅನೇಕ ರೈಲು ಮಾರ್ಗಗಳು ಹಾದುಹೋಗುತ್ತವೆ. ಹೀಗಾಗಿ ವನ್ಯಜೀವಿಗಳು ಮತ್ತು ರೈಲುಗಳ ನಡುವೆ ಸಂಭವಿಸಬಹುದಾದ ಭೀಕರ ಅಪಘಾತಗಳನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆ ನಿರಂತರ ಗಸ್ತು ತಿರುಗುವ ವ್ಯವಸ್ಥೆ ಮಾಡಿದೆ. ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಸಿಬ್ಬಂದಿಯ ಈ ಕಾರ್ಯವನ್ನು ಶ್ಲಾಘಿಸಿದ್ದು, ಇದು ಅಸ್ಸಾಂನ ಗಜರಾಜರಿಗೆ ಕಲ್ಪಿಸಲಾದ ಸುರಕ್ಷತಾ ಕಾರಿಡಾರ್ ಎಂದು ಬಣ್ಣಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ
ಸಿಬ್ಬಂದಿಯ ಪ್ರಶಂಸನೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆಯಾದರೂ, ಪ್ರತಿಯೊಮ್ಮೆ ರೈಲು ತಡೆಯುವುದೇ ಶಾಶ್ವತ ಪರಿಹಾರವೇ ಎಂಬ ಪ್ರಶ್ನೆಯೂ ಎದ್ದಿದೆ. ವನ್ಯಜೀವಿ ಕಾರಿಡಾರ್ ಪ್ರದೇಶಗಳಲ್ಲಿ ಮೇಲ್ಸೇತುವೆಗಳು, ಭೂಗತ ಮಾರ್ಗಗಳು ಅಥವಾ ಪ್ರತ್ಯೇಕ ಸಂಚಾರ ಕಾರಿಡಾರ್ ನಿರ್ಮಿಸುವ ಮೂಲಕ ಪ್ರಾಣಿಗಳ ನೈಸರ್ಗಿಕ ಸಂಚಾರಕ್ಕೆ ಅಡಚಣೆಯಾಗದಂತೆ ದೀರ್ಘಕಾಲದ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ (ಏಜೆನ್ಸೀಸ್).