ಗುವಾಹಟಿ: ಅಸ್ಸಾಂ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಶರ್ಮಾ ದೇಶದ ಅತ್ಯಂತ ಭ್ರಷ್ಟ ಸಿಎಂ ಎಂದು ಕರೆದಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಅಸ್ಸಾಂನ ಬಿಸ್ವಾನಾಥ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಜನರು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತಿದೆ. ಅವರು ಇನ್ನೂ ಕೆಲವು ದಿನ ಮಾತನಾಡಲಿ. ಬಳಿಕ ಕಾಂಗ್ರೆಸ್ ಅಸ್ಸಾಂನಲ್ಲಿ ಸರ್ಕಾರ ರಚಿಸುತ್ತದೆ. ಮತ್ತು ಅವರು ಕ್ಷಮೆ ಕೇಳಿದರೂ ಕಾನೂನು ಕ್ರಮ ಕೈಗೊಳ್ಳದೆ ಬಿಡಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದ ನೀತಿಯು ಅಸ್ಸಾಂ ಅನ್ನು ಒಂದುಗೂಡಿಸಲು ತಮ್ಮ ಇಡೀ ಜೀವನವನ್ನು ಶ್ರಮಿಸಿದ ದಿವಂಗತ ಸಂಗೀತಗಾರ ಜುಬೀನ್ ಗಾರ್ಗ್ ಅವರ ತತ್ವವನ್ನು ಹೋಲುತ್ತದೆ. ಜುಬೀನ್ ಗಾರ್ಗ್ ತಮ್ಮ ಜೀವನದುದ್ದಕ್ಕೂ ಅಸ್ಸಾಂ ಜನರನ್ನು ಒಗ್ಗೂಡಿಸಲು ಶ್ರಮಿಸಿದರು, ಅವರು ಯಾರೊಂದಿಗೂ ಕೆಟ್ಟದಾಗಿ ವರ್ತಿಸಿಲ್ಲ. ಕಾಂಗ್ರೆಸ್ ತತ್ವಶಾಸ್ತ್ರವೂ ಹಾಗೆಯೇ, ದ್ವೇಷದ ವಿರುದ್ಧ ಪ್ರೀತಿಯನ್ನು ಹರಡುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).