ಹಸಿವಿನಿಂದ ಸೀಬೆ ಹಣ್ಣು ಕಿತ್ತಿದ್ದಕ್ಕೆ ಬಾಲಕಿಗೆ ಇದೆಂಥಾ ಶಿಕ್ಷೆ? ಮನಕಲಕುವ ವಿಡಿಯೋ ವೈರಲ್! Retired soldier
- ಹಸಿವಿನಿಂದ ಪೇರಳೆ ಹಣ್ಣು ಕಿತ್ತಿದ್ದಕ್ಕೆ ಬಾಲಕಿಯನ್ನು ಕಟ್ಟಿಹಾಕಿ ಥಳಿಸಿದ ಮಾಜಿ ಸೈನಿಕ
- ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ
Retired soldier : ಹಸಿವಿನಿಂದ ಪೇರಳೆ ಹಣ್ಣು ಕಿತ್ತಿದ್ದಕ್ಕೆ ಮಾಜಿ ಸೈನಿಕನೊಬ್ಬ ಬಾಲಕಿಯನ್ನು ಕಟ್ಟಿಹಾಕಿ ಥಳಿಸಿದ ಅಮಾನವೀಯ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಏಟು ತಿಂದ ಬಾಲಕಿಯು ವಲಸೆ ಕಾರ್ಮಿಕನ ಮಗಳು. ಮಾಜಿ ಸೈನಿಕನ ಮನೆಯ ಹೊರಗಿನ ಮರದಿಂದ ಪೇರಳೆ ಹಣ್ಣು ಕಿತ್ತಿದ್ದಕ್ಕೆ ಬಾಲಕಿಯನ್ನು ಥಳಿಸಲಾಯಿತು. ಈ ಘಟನೆಯನ್ನು ಸ್ಥಳೀಯ ನಿವಾಸಿಯಾಗಿರುವ ಮರ್ಚೆಂಟ್ ನೇವಿಯ ಅಧಿಕಾರಿ ರೋಹಿತ್ ಎಂಬುವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ ಮಾಜಿ ಸೈನಿಕನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಆದಾಗ್ಯೂ, ಸೈನಿಕನ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.
ಅಷ್ಟಕ್ಕೂ ನಡೆದಿದ್ದೇನು?
ಬಾಲಕಿ ಪೇರಳೆ ಹಣ್ಣು ಕೀಳುವುದನ್ನು ನೋಡಿದ ಮಾಜಿ ಸೈನಿಕ, ಆಕೆಯನ್ನು ಮನೆಯೊಳಗೆ ಕರೆದೊಯ್ದು, ಕೈಗಳನ್ನು ಸರಪಳಿಗಳಿಂದ ಮೆಟ್ಟಿಲುಗಳ ಕಂಬಿಗೆ ಕಟ್ಟಿದ್ದಾರೆ. ಅಲ್ಲದೆ, ಕಡ್ಡಿಯಿಂದ ಥಳಿಸಿದ್ದಾರೆ ಎಂಬ ಆರೋಪವಿದೆ. ಆ ಬಾಲಕಿ ಅಳುತ್ತಾ ತನ್ನನ್ನು ರಕ್ಷಿಸುವಂತೆ ರೋಹಿತ್ ಅವರನ್ನು ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ದೃಶ್ಯವನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ತುಂಬಿಕೊಳ್ಳುತ್ತದೆ.
ಬಾಲಕಿಯು ತಮ್ಮ ಮರದಿಂದ ಪೇರಳೆ ಹಣ್ಣು ಕದ್ದ ಕಾರಣ ಆಕೆಯನ್ನು ಕಟ್ಟಿಹಾಕಲಾಗಿದೆ ಎಂದು ಮಾಜಿ ಸೈನಿಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ರೋಹಿತ್ ಅವರು ಕೂಡ ವಿಡಿಯೋದಲ್ಲಿ ಸೈನಿಕನನ್ನು ಟೀಕಿಸುತ್ತಿರುವುದು ಕಂಡುಬರುತ್ತದೆ. ವಿಡಿಯೋ ನೋಡಿದ ನೆಟ್ಟಿಗರು ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕನೇ ಇಂಥಾ ಕೃತ್ಯ ಮಾಡಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರೋಹಿತ್, ಮಕ್ಕಳ ಸಹಾಯವಾಣಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಮಾಜಿ ಸೈನಿಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮಗುವಿನ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ರೋಹಿತ್ ನಂತರ ಬಹಿರಂಗಪಡಿಸಿದರು.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು, ಮಾಜಿ ಸೈನಿಕನನ್ನು ಪ್ರಶ್ನಿಸಿ ಮಗುವಿನ ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಂಡರು. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೈನಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್).