Sukhu Government | ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು 
ದೇಶ

ಜನಾದೇಶ ಧಿಕ್ಕರಿಸಿದವರಿಗೆ ಶಿಕ್ಷೆ... ಅನರ್ಹ ಶಾಸಕರ ಪಿಂಚಣಿ ಕಸಿದುಕೊಂಡ ಹಿಮಾಚಲ ಪ್ರದೇಶ ವಿಧಾನಸಭೆ | Sukhu Government

Sukhu Government: ಹಿಮಾಚಲ ಪ್ರದೇಶ ಸರ್ಕಾರ ಗುರುವಾರ (ಏಪ್ರಿಲ್ 2) ಹಿಮಾಚಲ ಪ್ರದೇಶ ವಿಧಾನಸಭೆ (ಸದಸ್ಯರ ಭತ್ಯೆ ಮತ್ತು ಪಿಂಚಣಿ) ತಿದ್ದುಪಡಿ ಮಸೂದೆ, 2026 ಅಂಗೀಕರಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಹೊಸ ಕಾನೂನಿನ ಪ್ರಕಾರ, ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹಗೊಂಡ ಶಾಸಕರು ಇನ್ನು ಮುಂದೆ ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ.
2024 ರ ಮಾರ್ಚ್​​ನಲ್ಲಿ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಆರು ಶಾಸಕರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸರ್ಕಾರ ಹೇಳಿದೆ.
ಈ ಮಸೂದೆಯಿಂದಾಗಿ ಮೊದಲ ಬಾರಿಗೆ ಶಾಸಕರಾಗಿದ್ದ ಚೈತನ್ಯ ಶರ್ಮಾ ಮತ್ತು ದೇವೇಂದರ್ ಭುಟ್ಟೋ ಪಿಂಚಣಿ ಅರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದ್ದು, ಹಾಗೆಯೇ ಉಪಚುನಾವಣೆಯಲ್ಲಿ ಸೋತ ರವಿ ಠಾಕೂರ್ ಮತ್ತು ರಾಜಿಂದರ್ ರಾಣಾ 14ನೇ ವಿಧಾನಸಭೆ ಅವಧಿಗೆ ಪಿಂಚಣಿ ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ ಪುನರಾಯ್ಕೆಯಾದ ಸುಧೀರ್ ಶರ್ಮಾ ಮತ್ತು ಇಂದರ್ ದತ್ ಲಖನ್‌ಪಾಲ್ ಮೇಲೆ ಈ ಕಾನೂನು ಯಾವುದೇ ಪ್ರಭಾವ ಬೀರುವುದಿಲ್ಲ.
2024 ರ ಫೆಬ್ರವರಿಯಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಪರವಾಗಿ ಅಡ್ಡ ಮತದಾನ ಮಾಡಿ, ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ವಿಪ್ ಧಿಕ್ಕರಿಸಿದ ಕಾರಣಕ್ಕೆ ಈ ಆರು ಮಂದಿಯನ್ನು ಅನರ್ಹಗೊಳಿಸಲಾಗಿತ್ತು. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಈ ಮಸೂದೆಯನ್ನು ಮಂಡಿಸಿದ್ದು, ಸಾರ್ವಜನಿಕರು ನೀಡಿದ ಜನಾದೇಶವನ್ನು ಗೌರವಿಸುವುದು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ. ಪ್ರಜಾಪ್ರಭುತ್ವವನ್ನು ಮಾರಾಟಕ್ಕಿಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಸುಖು, ಬಿಜೆಪಿ ಈ ಕ್ರಮವನ್ನು ವಿರೋಧಿಸುತ್ತಿರುವುದು ಆಪರೇಷನ್ ಕಮಲದಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ನೇರ ಆರೋಪ ಮಾಡಿದ್ದಾರೆ.
ಅನರ್ಹ ಶಾಸಕರ ಆಸ್ತಿಗಳ ಸಮೀಕ್ಷೆ ನಡೆಸಿ ಅವರ ಮೇಲೆ ಕೇಸ್ ದಾಖಲಿಸುವ ಮೂಲಕ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರಾದ ಹರ್ಷವರ್ಧನ್ ಚೌಹಾಣ್ ಮತ್ತು ಜಗತ್ ಸಿಂಗ್ ನೇಗಿ, ರಾಜಕೀಯ ಪಕ್ಷಾಂತರ ತಡೆಯಲು ವಿವರವಾದ ಚರ್ಚೆಯ ನಂತರವೇ ಈ ಮಸೂದೆಯನ್ನು ತರಲಾಗಿದೆಯೇ ಹೊರತು ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ(ಏಜೆನ್ಸೀಸ್​​).