ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಲಹಾಬಾದ್ ಹೈಕೋರ್ಟ್
- ಶಾಲಾ ಸಮವಸ್ತ್ರದ ಜೊತೆ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ
- ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ
- ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಲಹಾಬಾದ್ ಹೈಕೋರ್ಟ್
ಉತ್ತರ ಪ್ರದೇಶ: ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Hijab Verdict Allahabad High Court) ವಜಾಗೊಳಿಸಿದೆ.
ವಿದ್ಯಾರ್ಥಿನಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ನನ್ನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ!
ಪ್ರಯಾಗರಾಜ್ ನಿವಾಸಿ ಹಾಗೂ 11 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ, ಹಿಜಾಬ್ ಧರಿಸುವುದು ನನ್ನ ಧಾರ್ಮಿಕ ಸ್ವಾತಂತ್ರ್ಯವಾಗಿದ್ದು, ಇದಕ್ಕೆ ಶಾಲೆಯಲ್ಲಿ ಅವಕಾಶ ನೀಡುತ್ತಿಲ್ಲ, ಹೀಗಾಗಿ ನನ್ನ ಧಾರ್ಮಿಕ ಸ್ವಾತಂತ್ರ್ಯ ಹರಣವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು. ಆದ್ದರಿಂದ, ನೀವು ನನಗೆ, ನನ್ನ ಶಾಲೆಯ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸಂವಿಧಾನದ 25 ನೇ ವಿಧಿಯಲ್ಲಿ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ, ಇಲ್ಲಿ ಧರ್ಮದ ಅತ್ಯಗತ್ಯ ಆಚರಣೆಗಳಿಗೆ ಮಾತ್ರ ಅವಕಾಶವಿದೆ.
ಆದರೆ ಹಿಜಾಬ್, ಇಸ್ಲಾಂನ ಅತ್ಯಗತ್ಯ ಆಚರಣೆ ಎನ್ನುವುದಕ್ಕೆ ಯಾವುದೇ ಐತಿಹಾಸಿಕ ಹಾಗೂ ನ್ಯಾಯೀಕ ಪುರಾವೆಗಳಿಲ್ಲ. ಅಷ್ಟೇ ಅಲ್ಲದೇ ಕರ್ನಾಟಕ ಹೈಕೋರ್ಟ್ ಹಿಜಾಬ್ ಅನ್ನು ಶಾಲಾ ಆವರಣದಲ್ಲಿ ಧರಿಸುವುದಕ್ಕೆ ನಿಷೇಧವನ್ನು ಹೇರಿದೆ. ಇದರ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಕಾರಣ, ವ್ಯತಿರಿಕ್ತ ತೀರ್ಪನ್ನು ನೀಡಲು ನ್ಯಾಯಪೀಠ ನಿರಾಕರಿಸಿದೆ.
ಹಾಗೆಯೇ, ಅರ್ಜಿದಾಳ ಬಾಲಕಿ, ಹುಟ್ಟಿನಿಂದ ಹಿಜಾಬ್ ಅನ್ನು ಧರಿಸುತ್ತಿಲ್ಲ, ಆಕೆಯ ಅರ್ಜಿಯಲ್ಲಿರುವಂತೆ 6 ನೇ ತರಗತಿಗೆ ಪ್ರವೇಶ ಪಡೆದಾಗನಿಂದ ಹಿಜಾಬ್ ಧಾರಣೆ ಮಾಡುತ್ತಿದ್ದಾಳೆ. ಅಂದ ಮೇಲೆ ಇದು ಕಡ್ಡಾಯ ಧಾರ್ಮಿಕ ಆಚರಣೆಯಲ್ಲ, ಒಂದು ವೇಳೆ ಕಡ್ಡಾಯ ಧಾರ್ಮಿಕ ಆಚರಣ ಆಗಿದೆ ಎಂದು ಊಹಿಸಿದರೂ, ಅರ್ಜಿದಾರಳೇ ಅನೇಕ ಸಂದರ್ಭದಲ್ಲಿ ಹಿಜಾಬ್ ಧಾರಣೆ ಮಾಡದ ಕಾರಣ ಇದು ಕಡ್ಡಾಯ ಧಾರ್ಮಿಕ ಆಚರಣೆ ಎಂದು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ, (ಏಜನ್ಸೀಸ್).