ದೇಶ

ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷಾ ನೇಮಕಾತಿ ರದ್ದುಗೊಳಿಸುವ ಜಾರ್ಖಂಡ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ | Jharkhand

ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗೆ ಮಣಿದು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಯಡಿಯಲ್ಲಿ ನಡೆಸಲಾದ 2,300 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ(ನ. 06) ರದ್ದುಗೊಳಿಸಿದೆ.

ರಾಂಚಿ: ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗೆ ಮಣಿದು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ ಜೆಎಸ್‌ಎಸ್‌ಸಿ-ಸಿಜಿಎಲ್ ಪರೀಕ್ಷೆಯಡಿಯಲ್ಲಿ ನಡೆಸಲಾದ 2,300 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ(ನ. 06) ರದ್ದುಗೊಳಿಸಿದೆ.

ನೇಮಕಾತಿಯನ್ನು ರದ್ದುಗೊಳಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರ ಮತ್ತು ಅಭ್ಯರ್ಥಿಗಳ ವಾದಗಳನ್ನು ಆಲಿಸಿದ್ದ ನ್ಯಾಯಾಲಯವು ಅಕ್ಟೋಬರ್ 8 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಇಂದು ತೀರ್ಪು ಪ್ರಕಟಿಸಿದ ಹೈಕೋರ್ಟ್​ನ ನ್ಯಾ. ದೀಪಕ್ ರೋಷನ್ ಅವರ ನೇತೃತ್ವದ ನ್ಯಾಯಪೀಠವು, ಜಾಹೀರಾತು ಸಂಖ್ಯೆ 10/2023ರ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಪುನಃ ನೇಮಕ ಮಾಡಿಕೊಳ್ಳುವಂತೆ ಆದೇಶಿಸಿದೆ. ಅಲ್ಲದೆ, ಅವರ ಸೇವೆಯನ್ನು ಯಾವುದೇ ಅಡಚಣೆಯಿಲ್ಲದೆ ನಿರಂತರ ಸೇವೆಯೆಂದು ಪರಿಗಣಿಸಬೇಕೆಂದು ನಿರ್ದೇಶಿಸಿದೆ.

ಇದಲ್ಲದೆ, ನೇಮಕಾತಿಯನ್ನು ರದ್ದುಗೊಳಿಸಿದ ಅಧಿಸೂಚನೆಯಿಂದಾಗಿ ಅಭ್ಯರ್ಥಿಗಳು ಯಾವುದೇ ಹಣಕಾಸಿನ ಅಥವಾ ಇತರ ಸೇವಾ ಸಂಬಂಧಿತ ಪ್ರಯೋಜನಗಳಿಂದ ವಂಚಿತರಾಗಬಾರದು ಎಂದು ಸ್ಪಷ್ಟಪಡಿಸಿದೆ.

ಅರ್ಜಿದಾರರು JSSC-CGL ಪರೀಕ್ಷೆಯನ್ನು ರದ್ದುಗೊಳಿಸುವ ಸರ್ಕಾರದ ಆದೇಶವು ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು. ಸರ್ಕಾರ, ಸಂಸ್ಥೆಯ ಸಮಗ್ರತೆಯನ್ನು ಎತ್ತಿಹಿಡಿಯಲು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

ಅಪೂರ್ಣ ತನಿಖೆಯ ಆಧಾರದ ಮೇಲೆ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವುದು ಸಮರ್ಥನೀಯವಲ್ಲ ಎಂದಿರುವ ನ್ಯಾಯಾಲಯ, ಸಂಪೂರ್ಣ ಆಯ್ಕೆ ಪ್ರಕ್ರಿಯೆಯು ವ್ಯವಸ್ಥಿತ ಅಕ್ರಮಗಳಿಂದ ಕೂಡಿದೆ ಎಂದು ಸಾಬೀತುಪಡಿಸಲು ಯಾವುದೇ ಕಾಂಕ್ರೀಟ್, ಸತ್ಯ ಆಧಾರಿತ ವಿಚಾರಣೆ ಅಥವಾ ಪುರಾವೆಗಳನ್ನು ಪ್ರಸ್ತುತಪಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದೆ.

ಕೆಲವು ವ್ಯಕ್ತಿಗಳ ವಿರುದ್ಧ ಆರೋಪಗಳಿವೆ, ತನಿಖೆಗಳು ಬಾಕಿ ಇವೆ ಎಂಬ ಕಾರಣಕ್ಕೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳ ನೇಮಕಾತಿಗಳನ್ನು ರದ್ದುಗೊಳಿಸಲಾಗುವುದಿಲ್ಲ. ತನಿಖೆ ಮುಗಿದ ಬಳಿಕವೇ ಅಕ್ರಮಗಳಲ್ಲಿ ಭಾಗಿಯಾಗಿದ ಅಭ್ಯರ್ಥಿಗಳನ್ನು ಗುರುತಿಸಬಹುದು ಮತ್ತು ನಿರಪರಾಧಿ ಅಭ್ಯರ್ಥಿಗಳನ್ನು ಅವರಿಂದ ಬೇರ್ಪಡಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪರಿಣಾಮವಾಗಿ, ಈ ಸೂಕ್ತ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ನಿರ್ಧಾರವು ಕಾನೂನು ಪರಿಶೀಲನೆಗೆ ನಿಲ್ಲುವುದಿಲ್ಲ. ನೈಸರ್ಗಿಕ ನ್ಯಾಯದ ತತ್ವಗಳನ್ನು ನಿರ್ಲಕ್ಷಿಸುವುದು ಪ್ರಮಾಣಿತ ಅಭ್ಯಾಸವಲ್ಲ, ಬದಲಿಗೆ ಒಂದು ಅಪವಾದ ಎಂದು ತಿಳಿಸಿದೆ (ಏಜೆನ್ಸೀಸ್).