ಕುಂಭಮೇಳದ ವೈರಲ್ ಗರ್ಲ್ ಮೊನಾಲಿಸಾಗೆ ಬಿಗ್ ಶಾಕ್: ಪೊಲೀಸ್ ರಕ್ಷಣೆಯನ್ನು ಹಿಂಪಡೆದ ಹೈಕೋರ್ಟ್! Kumbh Mela viral girl
- ಕುಂಭಮೇಳದ ವೈರಲ್ ಗರ್ಲ್ ಮೊನಾಲಿಸಾ ಭೋಸ್ಲೆ ಮತ್ತು ಆಕೆಯ ಪತಿಗೆ ನೀಡಿದ್ದ ಪೊಲೀಸ್ ರಕ್ಷಣೆ ಹಿಂತೆಗೆದುಕೊಂಡ ಕೇರಳ ಹೈಕೋರ್ಟ್
- ವಿಳಾಸ ಹಾಗೂ ಫೋನ್ ನಂಬರ್ ಸಿಗದೆ ಮೊನಾಲಿಸಾ ಮತ್ತು ಪತಿ ಫರ್ಮಾನ್ ಖಾನ್ ನಾಪತ್ತೆಯಾಗಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದ ಸರ್ಕಾರ
- ತಮ್ಮನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇನ್ನು ಮುಂದೆ ಯುವತಿ ಸ್ವತಃ ವಿನಂತಿಸಿದರೆ ಮಾತ್ರ ರಕ್ಷಣೆ ನೀಡಲು ನ್ಯಾಯಾಲಯದ ಆದೇಶ
- ಮಧ್ಯಪ್ರದೇಶಕ್ಕೆ ಮರಳಿದರೆ ಮರ್ಯಾದೆ ಹತ್ಯೆ ಮಾಡುತ್ತಾರೆ ಎಂದು ಈ ಹಿಂದೆ ಎರ್ನಾಕುಲಂ ಪೊಲೀಸರಿಂದ ರಕ್ಷಣೆ ಪಡೆದಿದ್ದ ಮೊನಾಲಿಸಾ
ಕೊಚ್ಚಿ: ಕುಂಭಮೇಳದ ವೈರಲ್ ಗರ್ಲ್( Kumbh Mela viral girl ) ಮೊನಾಲಿಸಾ ಭೋಸ್ಲೆ ಮತ್ತು ಆಕೆಯ ಪತಿ ಫರ್ಮಾನ್ ಖಾನ್ಗೆ ನೀಡಲಾಗಿದ್ದ ಪೊಲೀಸ್ ರಕ್ಷಣೆಯನ್ನು ಕೇರಳ ಹೈಕೋರ್ಟ್ ಹಿಂತೆಗೆದುಕೊಂಡಿದೆ. ಇನ್ನು ಮುಂದೆ ಕೇವಲ ಆ ಯುವತಿ ಸ್ವತಃ ವಿನಂತಿಸಿದರೆ ಮಾತ್ರ ಪೊಲೀಸರು ರಕ್ಷಣೆ ಒದಗಿಸಬೇಕು ಎಂದು ನ್ಯಾಯಾಲಯವು ಸ್ಪಷ್ಟ ನಿರ್ದೇಶನ ನೀಡಿದೆ.
ಸದ್ಯ ನಾನು ಕೇರಳದನಲ್ಲಿ ಇರುವುದರಿಂದ ಬದುಕಿದ್ದೇನೆ. ಒಂದು ವೇಳೆ ಮಧ್ಯಪ್ರದೇಶಕ್ಕೆ ಮರಳಿದರೆ, ಅಲ್ಲಿ ನನ್ನನ್ನು 'ಮರ್ಯಾದೆ ಹತ್ಯೆ' ಮಾಡುತ್ತಾರೆ ಎಂದು ಮೊನಾಲಿಸಾ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಗೆ ರಕ್ಷಣೆ ನೀಡುವಂತೆ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರಿಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಅರ್ಜಿ ಇತ್ಯರ್ಥವಾಗುವವರೆಗೆ ಆಕೆಗೆ ರಕ್ಷಣೆ ಖಚಿತಪಡಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಸೆಂಟ್ರಲ್ ಸ್ಟೇಷನ್ ಎಸ್‌ಎಚ್‌ಒ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಆದರೆ, ಮೊನಾಲಿಸಾ ಮತ್ತು ಆಕೆಯ ಪತಿ ನಾಪತ್ತೆಯಾಗಿದ್ದಾರೆ ಹಾಗೂ ಅವರು ನೀಡಿರುವ ವಿಳಾಸ ಅಥವಾ ದೂರವಾಣಿ ಸಂಖ್ಯೆಯ ಮೂಲಕ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರ ತಿಳಿಸಿದ ಬೆನ್ನಲ್ಲೇ ಹೈಕೋರ್ಟ್ ಈ ರಕ್ಷಣೆಯನ್ನು ಹಿಂತೆಗೆದುಕೊಂಡಿದೆ. ಅಲ್ಲದೆ, ಹೀಗೆ ನಾಪತ್ತೆಯಾಗುವುದು ಆ ಯುವತಿಯ ಹಳೇ ಚಾಳಿ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇನ್ನು ಯುವತಿಯನ್ನು ಅಪಹರಿಸಿ ಮದುವೆ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಮಧ್ಯಪ್ರದೇಶ ಪೊಲೀಸರು ಆಕೆಯ ಪತಿಯ ವಿರುದ್ಧ ಪೋಕ್ಸೊ (POCSO) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಕೇರಳ ಹೈಕೋರ್ಟ್ ಫರ್ಮಾನ್ ಬಂಧನಕ್ಕೆ ಒಂದು ತಿಂಗಳ ಕಾಲ ತಡೆಯಾಜ್ಞೆ ನೀಡಿತ್ತು. ಈ ಅವಧಿಯಲ್ಲಿ ಆತ ಮುಂಗಡ ಜಾಮೀನಿಗಾಗಿ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸ್ಪಷ್ಟಪಡಿಸಿತ್ತು.
ಫರ್ಮಾನ್ ಸಲ್ಲಿಸಿದ್ದ ನಿರೀಕ್ಷಿತ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಪೊಲೀಸರು ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿದ್ದಾರೆ. ಯುವತಿಯು ಅಪ್ರಾಪ್ತ ವಯಸ್ಕಳಾಗಿದ್ದರಿಂದ ಇವರಿಬ್ಬರ ನಡುವೆ ನಡೆದ ಮದುವೆಯು ಕಾನೂನುಬದ್ಧವಾಗಿ ಅಸಿಂಧು ಎಂದು ಪೊಲೀಸರು ವಾದಿಸಿದ್ದಾರೆ. ಅಲ್ಲದೆ, ಅಪ್ರಾಪ್ತೆಯ ಜನ್ಮ ದಿನಾಂಕದ ಪ್ರಮಾಣಪತ್ರದಲ್ಲಿ ತಿದ್ದುಪಡಿಗಳನ್ನು ಮಾಡುವ ಮೂಲಕವೇ ಈ ವಿವಾಹವನ್ನು ಮಾಡಲಾಗಿದೆ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಫರ್ಮಾನ್ ವಿರುದ್ಧ ಅಪಹರಣ, ಪೋಕ್ಸೋ (POCSO) ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಯುವತಿಯು, ತನಗೆ ಈಗಾಗಲೇ 18 ವರ್ಷ ತುಂಬಿದ್ದು, ಮಧ್ಯಪ್ರದೇಶ ಪೊಲೀಸರು ಮಂಡಿಸುತ್ತಿರುವ ದಾಖಲೆಗಳೇ ನಕಲಿ ಎಂದು ವಾದಿಸುತ್ತಿದ್ದಾಳೆ.
ಯುವತಿಯು ಮಾರ್ಚ್ 11 ರಂದು ವಿವಾಹವಾಗಿದ್ದು, ಈ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯ ಪ್ರಕಾರ ಮದುವೆಯ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ವಯಸ್ಸಿನ ಪುರಾವೆಗಾಗಿ ಯುವತಿಯು ಸಲ್ಲಿಸಿರುವ ಜನ್ಮ ಪ್ರಮಾಣಪತ್ರವು ಸಂಪೂರ್ಣವಾಗಿ ನಕಲಿಯಾಗಿದೆ ಎಂದು ಆಯೋಗವು ಸ್ಪಷ್ಟಪಡಿಸಿದೆ, (ಏಜೆನ್ಸೀಸ್).