ಗುವಾಹಟಿ: ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಅಸ್ಸಾಂನಲ್ಲಿ ಸ್ಥಳೀಯ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದ ಸೋಮವಾರ(ಫೆ. 16) ಕಾಂಗ್ರೆಸ್ಗೆ ದಿಢೀರ್ ರಾಜೀನಾಮೆ ನೀಡಿದ್ದ ಮಾಜಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ(Bhupen Bora), ಹೈಕಮಾಂಡ್ ಮಧ್ಯಪ್ರವೇಶದಿಂದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ವಾಪಸ್ ಪಡೆದಿದ್ದಾರೆ.
ಸೋಮವಾರ ಬೆಳಗ್ಗೆ ಬೋರಾ ಕಾಂಗ್ರೆಸ್ ಪಕ್ಷ ರಾಜೀನಾಮೆ ಸಲ್ಲಿಸಿದ್ದು, ಅದನ್ನು ಹೈಕಮಾಂಡ್ಗೆ ಕಳುಹಿಸಿದ್ದೇನೆ ಎಂದು ಹೇಳಿದ್ದರು. ತಕ್ಷಣ ಎಚ್ಚೆತ್ತುಕೊಂಡ ಹೈಕಮಾಂಡ್ ಸ್ಥಳೀಯ ನಾಯಕರನ್ನು ಅವರ ಮನವೊಲಿಸುವಂತೆ ಹೇಳಿದೆ. ಅದರ ಪ್ರಕಾರ ಕಾಂಗ್ರೆಸ್ ಅದ್ಯಕ್ಷ ಗೌರವ್ ಗೊಗೊಯ್, ಎಐಸಿಸಿ ರಾಜ್ಯ ಉಸ್ತುವಾರಿ ಜಿತೇಂದ್ರ ಸಿಂಗ್ ಬೋರಾ ಮನೆಗೆ ಭೇಟಿ ನೀಡಿದ್ದಾರೆ.
ಈ ವೇಳೆ ಬೋರಾ ಜೊತೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದು, ಜೊತೆ ಹೈಕಮಾಂಡ್ ಜೊತೆಗೂ ದೂರವಾಣಿಯಲ್ಲಿ ಬೋರಾ ಅವರನ್ನು ಮಾತನಾಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ರಾಜೀನಾಮೆ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಎಐಸಿಸಿ ರಾಜ್ಯ ಉಸ್ತುವಾರಿ ಜಿತೇಂದ್ರ ಸಿಂಗ್, ಭುಪೇನ್ ಅವರು ಕಳೆದ 30 ವರ್ಷಗಳಿಂದ ಪಕ್ಷದಲ್ಲಿದ್ದರು. ಅವರು ಇಂದು ತಮ್ಮ ರಾಜೀನಾಮೆಯನ್ನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಭೂಪೇನ್ ಬೋರಾ ಕಾಂಗ್ರೆಸ್ ಕುಟುಂಬದ ಪ್ರಮುಖ ಸದಸ್ಯ. ಕೆಲವೊಮ್ಮೆ ಕಾಂಗ್ರೆಸ್ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳಿರುತ್ತವೆ. ಕಾಂಗ್ರೆಸ್ ಅಧ್ಯಕ್ಷರು ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕತ್ವ ಅವರೊಂದಿಗೆ ದೀರ್ಘ ಚರ್ಚೆ ನಡೆಸಿದೆ. ಈಗ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಚರ್ಚೆ ಬಗೆಹರಿದಿದೆ ಎಂದು ಹೇಳಿದ್ದಾರೆ.
ಗೌರವ್ ಗೊಗೊಯ್ ಮಾತನಾಡಿ, ಭೂಪೇನ್ ಕುಮಾರ್ ಬೋರಾ ನಮ್ಮ ಆಸ್ತಿ. ಅವರು ದುಷ್ಟರ ವಿರುದ್ಧ ಹೋರಾಡುತ್ತಿದ್ದಾರೆ. ಕಳೆದ 3 ಗಂಟೆಗಳ ಕಾಲ ಭೂಪೇನ್ ಕುಮಾರ್ ಬೋರಾ ಅವರೊಂದಿಗೆ ನಾವು ಚರ್ಚೆ ನಡೆಸಿದ್ದೇವೆ. ಅವರು ಕಾಂಗ್ರೆಸ್‌ನ ಪ್ರಬಲ ನಾಯಕರು. ಯಾವುದೇ ತಪ್ಪು ನಡೆದಿದ್ದರೆ, ಸಹೋದರನಾಗಿ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ. ರಾಹುಲ್ ಗಾಂಧಿ ಕೂಡ ಭೂಪೇನ್ ಕುಮಾರ್ ಬೋರಾ ಅವರೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಸುದ್ದಿಗಾರರೊಂದಿಗೆ ಮಾತನಾಡಿರುವ ಬೋರಾ, ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಹೈಕಮಾಂಡ್‌ನಿಂದ ಹೆಚ್ಚುವರಿ ಸಮಯವನ್ನು ಕೋರಿರುವುದಾಗಿ ಹೇಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ ನಂತರ ರಾಜೀನಾಮೆ ಅಂಗೀಕರಿಸಲಾಗಿಲ್ಲ ಎಂದು ಪಕ್ಷದ ನಾಯಕರು ಸೂಚಿಸಿದ್ದಾರೆ ಎಂದಿದ್ದಾರೆ (ಏಜೆನ್ಸೀಸ್).