- 77ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ದೆಹಲಿಯಲ್ಲಿ ಹೆಚ್ಚಿದ ಹೈ-ಅಲರ್ಟ್
- ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ದೆಹಲಿ ಪೊಲೀಸರು ಎಚ್ಚರ ವಹಿಸಿದ್ದಾರೆ
- ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಂಕಿತ ವ್ಯಕ್ತಿಗಳ ಭಯೋತ್ಪಾದಕರ ಭಾವಚಿತ್ರವಿರುವ ಪೋಸ್ಟರ್ಗಳನ್ನು ದೆಹಲಿಯಾದ್ಯಂತ ಅಂಟಿಸಲಾಗಿದೆ
- ಸಧ್ಯ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಮತ್ತು ಸುರಕ್ಷಿತವಾಗಿದೆ
ನವದೆಹಲಿ: 77ನೇ ಗಣರಾಜ್ಯೋತ್ಸವದ (Republic Day) ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಸ್ಥಳೀಯ ಪೊಲೀಸರು ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳು ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ದೆಹಲಿಯಾದ್ಯಂತ ರೈಲ್ವೆ ನಿಲ್ದಾಣಗಳು, ಅಂತರರಾಜ್ಯ ಬಸ್ ಟರ್ಮಿನಲ್‌ಗಳು ಮತ್ತು ಜನದಟ್ಟಣೆಯ ಮಾರುಕಟ್ಟೆ ಪ್ರದೇಶಗಳಲ್ಲಿ ವಾಂಟೆಡ್ ಭಯೋತ್ಪಾದಕರ ಭಾವಚಿತ್ರವಿರುವ ಪೋಸ್ಟರ್ಗಳನ್ನು ಅಂಟಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಪೋಸ್ಟರ್‌ಗಳಲ್ಲಿ ಬಬ್ಬರ್ ಖಾಲ್ಸಾ, ಜೈಶ್-ಎ-ಮೊಹಮ್ಮದ್ ಮತ್ತು ಅಲ್-ಖೈದಾದಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತರ ಚಿತ್ರಗಳನ್ನು ಒಳಗೊಂಡಿದೆ. ನಗರಾದ್ಯಂತ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಾರಿಗೆ ಮೂಲಕ ಹಾದುಹೋಗುವುದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನಗರದ ರೈಲು ನಿಲ್ದಾಣ, ಹಳೆ ದೆಹಲಿ ರೈಲು ನಿಲ್ದಾಣ, ನಿಜಾಮುದ್ದೀನ್, ಆನಂದ್ ವಿಹಾರ್ ಮತ್ತು ಸರೈ ರೋಹಿಲ್ಲಾ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪೊಲೀಸರು ವಿಶೇಷ ಕಣ್ಗಾವಲು ನಡೆಸಲಾಗುತ್ತಿದ್ದು, ಜನನಿಬಿಡ ಪ್ರದೇಶಗಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಸರೋಜಿನಿ ನಗರ, ಕರೋಲ್ ಬಾಗ್, ಲಜಪತ್ ನಗರ, ಸದರ್ ಬಜಾರ್ ಮತ್ತು ಪಹರ್‌ಗಂಜ್ ಸೇರಿದಂತೆ ಹಲವಾರು ಜನದಟ್ಟಣೆಯಿರುವಂತಹ ಪ್ರದೇಶಗಳಲ್ಲಿ ಶಂಕಿತರ ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿದೆ. ಪ್ರಯಾಣಿಕರು ಅಥವಾ ಇನ್ನಿತರರು ಶಂಕಿತರನ್ನು ಕಂಡ ಕೂಡಲೇ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಿಬೇಕು ಎಂದು ದೆಹಲಿ ಪೊಲೀಸರು ಜನರಲ್ಲಿ ವಿನಂತಿಸಿದ್ದಾರೆ.
ಈ ಸಮಯದಲ್ಲಿ ನಿಮ್ಮ ಸುತ್ತ ಮುತ್ತ ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಲ್ಲಿ ಅಥವಾ ಅಸಹಜ ನಡವಳಿಕೆ ತೋರಿಸುತ್ತಿದ್ದರೆ, ಅಥವಾ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಅಥವಾ ಮಾರುಕಟ್ಟೆಗಳಲ್ಲಿ ಯಾರೂ ಇಲ್ಲದ ಬ್ಯಾಗ್‌ಗಳು, ಪೊಟ್ಟಣಗಳು ಅಥವಾ ಯಾವುದೇ ಅಪರಿಚಿತ ವಸ್ತುಗಳು ಬಿದ್ದಿರುವುದು ಕಂಡುಬಂದಲ್ಲಿ ಅವುಗಳನ್ನು ಮುಟ್ಟಬೇಡಿ. ಬದಲಿಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.
ಸಧ್ಯ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಮತ್ತು ಸುರಕ್ಷಿತವಾಗಿದೆ. ಸುಭದ್ರ ಗಣರಾಜ್ಯೋತ್ಸವ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (ಏಜೆನ್ಸೀಸ್).