PM Modi Raksha Bandhan | ಮಕ್ಕಳೊಂದಿಗೆ ಪ್ರಧಾನಿ ಮೋದಿ ರಕ್ಷಾಬಂಧನ ಸಂಭ್ರಮ 
ದೇಶ

ಲೋಕಕಲ್ಯಾಣ ಮಾರ್ಗದಲ್ಲಿ ರಾಖಿ ಹಬ್ಬದ ಕಳೆ: ಪುಟ್ಟ ಮಕ್ಕಳೊಂದಿಗೆ ಹೈ-ಫೈವ್ ನೀಡಿ ಸಂಭ್ರಮಿಸಿದ ಪ್ರಧಾನಿ ಮೋದಿ! | PM Modi Raksha Bandhan

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಶಾಲಾ ಬಾಲಕಿಯರು ಮತ್ತು ವಿದ್ಯಾರ್ಥಿಗಳೊಂದಿಗೆ ರಕ್ಷಾಬಂಧನವನ್ನು (PM Modi Raksha Bandhan) ಸಂಭ್ರಮದಿಂದ ಆಚರಿಸಿದರು. ಈ ವೇಳೆ ಯುವ ಅತಿಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದ ಅವರು, ನಗೆಯಾಡುತ್ತಾ ಕೈಗಳನ್ನು ಮುಟ್ಟಿಸಿ ಹೈ-ಫೈವ್ ನೀಡುವ ಮೂಲಕ ಸಂಭ್ರಮ ಹಂಚಿಕೊಂಡರು.

ಈ ಎಲ್ಲಾ ಅಪರೂಪದ ಕ್ಷಣಗಳನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮ್ಮ ನಿವಾಸದಲ್ಲಿ ನಡೆದ ರಕ್ಷಾಬಂಧನ ಆಚರಣೆಯ ವೇಳೆ ಪ್ರೀತಿಯ ನಗು ಮತ್ತು ಹೈ-ಫೈವ್ ಕ್ಷಣಗಳು ಕಂಡುಬಂದವು ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಶಾಲಾ ಸಮವಸ್ತ್ರ ಮತ್ತು ಎನ್‌ಸಿಸಿ ಕೆಡೆಟ್‌ಗಳ ಉಡುಪಿನಲ್ಲಿದ್ದ ಬಾಲಕಿಯರು ಪ್ರಧಾನಿ ಮೋದಿ ಅವರಿಗೆ ಪ್ರೀತಿ ಹಾಗೂ ರಕ್ಷಣೆಯ ಸಂಕೇತವಾಗಿ ರಾಖಿ ಕಟ್ಟಿದರು. ಮೋದಿಯವರು ವಿದ್ಯಾರ್ಥಿಗಳ ನಡುವೆಯೇ ಕುಳಿತು ಅವರೊಂದಿಗೆ ಆಪ್ತವಾಗಿ ಮಾತನಾಡಿದರು. ಸಾಂಪ್ರದಾಯಿಕ ರಕ್ಷಾಬಂಧನದ ಪೂಜಾ ತಟ್ಟೆಯೊಂದಿಗೆ ನಡೆದ ಈ ಸಂವಾದದಲ್ಲಿ, ಪ್ರಧಾನಿಯವರು ಯುವ ವಿದ್ಯಾರ್ಥಿಗಳೊಂದಿಗೆ ಮುಗುಳ್ನಗುತ್ತಾ ಹೈ-ಫೈವ್ ವಿನಿಮಯ ಮಾಡಿಕೊಂಡ ಕ್ಷಣಗಳು ಎದ್ದುಕಂಡವು.

ಪ್ರಧಾನಿ ಮೋದಿ ಅವರ ಈ ರೀತಿಯ ಆಪ್ತ ಸಂವಾದವನ್ನು ದೇಶದ ಯುವ ಸಮುದಾಯ, ವಿಶೇಷವಾಗಿ ಜೆನ್‌ ಜೀ ತಲೆಮಾರನ್ನು ತಲುಪುವ ಹೊಸ ರಾಜಕೀಯ ಸಂವಹನ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ. ಸಾಂಪ್ರದಾಯಿಕ ಸಾರ್ವಜನಿಕ ಭಾಷಣಗಳು ಅಥವಾ ನಿಯಮಿತ ಕಾರ್ಯಕ್ರಮಗಳನ್ನು ಮೀರಿ, ಸೋಶಿಯಲ್ ಮೀಡಿಯಾಗೆ ಸೂಕ್ತವಾಗುವಂತಹ ಸರಳ ಹಾಗೂ ಹತ್ತಿರವಾಗುವ ದೃಶ್ಯಗಳ ಮೂಲಕ ಯುವಕರನ್ನು ತಲುಪುವ ಪ್ರಯತ್ನ ಹೆಚ್ಚಾಗುತ್ತಿದೆ. ಪ್ರಧಾನಿಯವರ ಈ ಪೋಸ್ಟ್‌ನಲ್ಲಿ ನೇರವಾಗಿ ಯಾವುದೇ ರಾಜಕೀಯ ಉದ್ದೇಶವನ್ನು ಉಲ್ಲೇಖಿಸದಿದ್ದರೂ, ಶಾಲಾ ವಿದ್ಯಾರ್ಥಿಗಳೊಂದಿಗಿನ ಈ ಗೆಳತನದ ನಡವಳಿಕೆಯು ಅವರ ಸಾರ್ವಜನಿಕ ಬಿಂಬವನ್ನು ಹೆಚ್ಚು ಯುವಕೇಂದ್ರೀಯವಾಗಿಸಲು ನೆರವಾಗುತ್ತದೆ.

ಇದಕ್ಕೂ ಮುನ್ನ ದೇಶದ ಜನತೆಗೆ ರಕ್ಷಾಬಂಧನದ ಶುಭಾಶಯ ಕೋರಿದ್ದ ಪ್ರಧಾನಿ ಮೋದಿ, ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿದ್ದರು. ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದ ಅವರು, ರಕ್ಷಾಬಂಧನವು ಪ್ರತಿನಿಧಿಸುವ ಪ್ರೀತಿ, ಅಫೆಕ್ಷನ್ ಹಾಗೂ ಪರಸ್ಪರ ವಿಶ್ವಾಸದ ಬಂಧವು ಎಂದೆಂದಿಗೂ ಮುರಿಯದಂತೆ ಶಾಶ್ವತವಾಗಿ ಉಳಿಯಲಿ ಎಂದು ಆಶಿಸಿದ್ದರು