ಮಹಾನಗರಿ ಮುಂಬೈನಲ್ಲಿ ಧಾರಕಾರ ಮಳೆ
- ಧಾರಕಾರ ಮಳೆಗೆ ಮಹಾನಗರಿ ಮುಂಬೈ ತತ್ತರ
- ಥಾಣೆ, ರಾಯ್ಗಡ್ಗೆ ರೆಡ್ ಅಲರ್ಟ್ ನೀಡಿದ ಭಾರತೀಯ ಹವಾಮಾನ ಇಲಾಖೆ
- ವಿವಿ ಪರೀಕ್ಷೆಗಳು ಮುಂದೂಡಿಕೆ, ರೈಲು ಸಂಚಾರ ಸ್ಥಗಿತ
ಮುಂಬೈ: ದೇಶದಲ್ಲಿ ಬಿಸಿಲಿನ ಬೇಗೆಯೇ ಮುಂದುವರಿಯುತ್ತಿದೆ ಎನ್ನುವಾಗಲೇ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಮಹಾನಗರಿ ತತ್ತರಿಸಿದೆ. ಬಿರುಗಾಳಿ ಸಹಿತ ಮಳೆಗೆ ಮುಂಬೈ-ಪುಣೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ.
ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದ್ದು, ಮುಂಬೈನಿಂದ ಸಂಚರಿಸಬೇಕಿದ್ದ ರೈಲುಗಳು ನಿಂತಲೇ ನಿಂತಿವೆ. ಈ ನಿಟ್ಟಿನಲ್ಲಿ, ವಿಮಾನ ಮತ್ತು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಹಳೆಯ ಹೆದ್ದಾರಿ ಎರಡೂ ಮುಚ್ಚಿರುವ ಕಾರಣ, ಪ್ರಯಾಣಿಕರು ಮಾರ್ಗ ಮಧ್ಯೆಯೇ ಸಿಲುಕಿಕೊಂಡಿದ್ದು, ಎರಡೂ ನಗರಗಳ ನಡುವಿನ ಪ್ರಯಾಣ ಅಸ್ತವ್ಯಸ್ತಗೊಂಡಿದೆ.
ಮುಂಬೈನಲ್ಲಿ ಮಳೆಯಾರ್ಭಟ ಹಿನ್ನೆಲೆ ಭಾರತ ಹವಾಮಾನ ಇಲಾಖೆ ಮುಂಬೈನ ಕೆಲವು ಪ್ರದೇಶಗಳಿಗೆ ಆರೆಂಜ್ ಮತ್ತು ಪುಣೆ ಮತ್ತು ರಾಯ್ಗಢ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಮೂಲಕ ಆಯಾ ಪ್ರದೇಶಗಳ ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಬೆಳಗಿನ ಜಾವ 3.05ರ ಸುಮಾರಿಗೆ, ಕರ್ಜತ್-ಲೋನಾವಾಲ ಭೋರ್ ಘಾಟ್ ವಿಭಾಗದಲ್ಲಿ ಠಾಕೂರ್ವಾಡಿ ಸಮೀಪ ಭೂಕುಸಿತ ಸಂಭವಿಸಿದೆ.
ಪರೀಕ್ಷೆಗಳು ಮುಂದೂಡಿಕೆ
ಐಎಂಡಿ ನೀಡಿದ ಆರೆಂಜ್ ಅಲರ್ಟ್ ಬೆನ್ನಲ್ಲೇ ಮುಂಬೈ ವಿಶ್ವವಿದ್ಯಾಲಯವು ಇಂದು (ಜು.6) ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಭಾರಿ ಅಥವಾ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯ ಹಿನ್ನೆಲೆ ಕೆಲವು ದಿನಗಳ ಮಟ್ಟಿಗೆ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿದ್ದೇವೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.