ಸಾಂದರ್ಭಿಕ ಚಿತ್ರ 
ದೇಶ

ದೆಹಲಿ-ಎನ್​ಸಿಆರ್​ನಲ್ಲಿ ಭಾರಿ ಮಳೆ: ರಸ್ತೆಗಳೆಲ್ಲಾ ಜಲಾವೃತ, ಸಂಚಾರ ಅಸ್ತವ್ಯಸ್ಥ; ಜನಜೀವನ ಸ್ಥಗಿತ | Heavy rain

ನವದೆಹಲಿ: ಶುಕ್ರವಾರ(ಆ. 07) ದೆಹಲಿ ಮತ್ತು ಪಕ್ಕದ ರಾಜಧಾನಿ ಪ್ರದೇಶದಲ್ಲಿ(ಎನ್‌ಸಿಆರ್) ಭಾರೀ ಮಳೆಯಾಗುತ್ತಿದ್ದು(Heavy rain), ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಮತ್ತು ಜನಜೀವನ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.
ದೆಹಲಿಯಾದ್ಯಂತ ಮೆಹ್ರೌಲಿ-ಬದರ್‌ಪುರ ರಸ್ತೆ, ಐಟಿಒ, ವಜೀರಾಬಾದ್ ರಸ್ತೆ, ಪಟೇಲ್ ರಸ್ತೆ, ರೋಹ್ಟಕ್ ರಸ್ತೆ, ಶಂಕರ್ ರಸ್ತೆ, ಕೀರ್ತಿ ನಗರ ಮಾರ್ಗ, ದೆಹಲಿ-ಜೈಪುರ ಹೆದ್ದಾರಿ, ಪೀರಗಢಿ ಮತ್ತು ಶಾಹೀನ್ ಬಾಗ್ ಸೇರಿದಂತೆ ಹಲವಾರು ಪ್ರಮುಖ ಮಾರ್ಗಗಳಲ್ಲಿ ನೀರು ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.
ಇನ್ನೂ ನಿರಂತರ ಮಳೆಯಿಂದಾಗಿ ದೆಹಲಿಯ ಛತ್ತರ್‌ಪುರ ಫಾರ್ಮ್ ಪ್ರದೇಶ ಮತ್ತು ಟರ್ಮಿನಲ್ 1 ಬಳಿಯ ಮೆಹ್ರಾಮ್ ನಗರದಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ರಸ್ತೆಯಲ್ಲಿ ನೀರು ಸಂಗ್ರಹವಾಗಿದೆ. ಹಲವಾರು ಪ್ರಯಾಣಿಕರು ಸಂಜೆಯಾದ್ರೂ ಕಚೇರಿಗಳಿಂದ ಮನೆಗೆ ತಲುಪಲು ಸಾಧ್ಯವಾಗಿಲ್ಲ. ಕ್ಯಾಬ್ ಬುಕ್ಕಿಂಗ್ ಸಹ ಸಾಧ್ಯವಾಗದೇ ಜನ ಪೇಚಾಡಿದ್ದಾರೆ.

ಟ್ರಾಫಿಕ್ ಜಾಮ್

ಶಂಕರ್ ವಿಹಾರ್ ಬಳಿಯ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳು ಉದ್ದನೆಯ ಸರತಿ ಸಾಲಿನಲ್ಲಿ ಸಿಲುಕಿಕೊಂಡಿವೆ. ಹಾಗೆಯೇ ಗುರುಗ್ರಾಮ್‌ನಿಂದ ಧೌಲಾ ಕುವಾನ್‌ವರೆಗಿನ ರಸ್ತೆಯಲ್ಲಿ ಹಲವಾರು ಲೋಮೀಟರ್‌ಗಳವರೆಗೆ ಸಂಚಾರ ಜಾಮ್ ಉಂಟಾಗಿದೆ.
ಇನ್ನೂ ಪೂರ್ವ ದೆಹಲಿಯ ಶಕರ್‌ಪುರ ಮತ್ತು ನೆರೆಯ ಮಂದವಾಲಿಯಲ್ಲಿ, ಚರಂಡಿಗಳು ತುಂಬಿ ಹರಿಯುತ್ತಿದ್ದು, ಗುಂಡಿಗಳು ಮುಳುಗಿ, ರಸ್ತೆ ಜಲಾವೃತವಾಗಿದೆ. ಅಲ್ಲಿ ಇ-ರಿಕ್ಷಾಗಳು, ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳು ಸೇರಿದಂತೆ ಇಂದು ಕನಿಷ್ಠ ಮೂರು ಅಥವಾ ನಾಲ್ಕು ವಾಹನಗಳು ಪಲ್ಟಿಯಾಗಿವೆ ಎಂದು ವರದಿಯಾಗಿದೆ (ಏಜೆನ್ಸೀಸ್).