ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ದಟ್ಟ ಮಂಜು ಆವರಿಸಿದ್ದರಿಂದ ವಿಮಾನ ಕಾರ್ಯಾಚರಣೆಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. ಆದಾಗ್ಯೂ, ಬೆಳಗ್ಗೆಯಿಂದಲೇ ಕಡಿಮೆ ಗೋಚರತೆಯಿಂದಾಗಿ ಸುಮಾರು 228 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 5 ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಮಂಜಿನಿಂದಾಗಿ ರನ್‌ವೇಯಲ್ಲಿ ಗೋಚರತೆ ಕಡಿಮೆಯಾಗಿರುವುದು ಉತ್ತರ ಭಾರತದ ಇತರ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ವಿಮಾನ ಸೇವೆಗಳು ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದ್ದರೂ, ಕೆಲವು ವಿಮಾನಗಳ ನಿರ್ಗಮನ ಮತ್ತು ಆಗಮನದಲ್ಲಿ ವಿಳಂಬವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
228 ವಿಮಾನಗಳ ಹಾರಾಟ ರದ್ದು
ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಭಾರೀ ಮಂಜಿನಿಂದಾಗಿ 68 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು 5 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ಹೇಳಿದ್ದರು. ಇನ್ನು ಮಧ್ಯಾಹ್ನ 2 ಗಂಟೆ ಹೊತ್ತಿಗೆ ರನ್‌ವೇಯಲ್ಲಿ ಗೋಚರತೆ ಸುಧಾರಿಸಿದ ನಂತರ ವಿಮಾನ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ. ಆದರೆ, ಬೆಳಿಗ್ಗೆ ಆವರಿಸಿದ ಮಂಜು ದಿನವಿಡೀ ವಿಮಾನದ ವೇಳಾಪಟ್ಟಿಗೆ ಅಡ್ಡಿಪಡಿಸಿದೆ ಎಂದಿದ್ದಾರೆ.
ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣ ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ನೈಜ ಸಮಯದ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಹಾಗೆಯೇ ಮಂಜಿನಂತಹ ಹವಾಮಾನ ಪರಿಸ್ಥಿತಿಗಳಲ್ಲಿ ಸುರಕ್ಷತೆಯೇ ಪ್ರಮುಖ ಆದ್ಯತೆ ಎಂದು ಸ್ಪಷ್ಟಪಡಿಸಿದರು.
ಇಂಡಿಗೋ ಎಚ್ಚರಿಕೆ
ದೆಹಲಿ ಸೇರಿದಂತೆ ಉತ್ತರ ಭಾರತದ ವಿಮಾನ ನಿಲ್ದಾಣಗಳಲ್ಲಿ ದಟ್ಟವಾದ ಮಂಜು ಗೋಚರತೆಯ ಮೇಲೆ ಪರಿಣಾಮ ಬೀರುವುದರಿಂದ ಇಂಡಿಗೋ ಏರ್ಲೈನ್ ಪ್ರಯಾಣದಲ್ಲಿ ವಿಳಂಬ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಅಂದಹಾಗೇ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ನಿಮ್ಮ ವಿಮಾನ ಸಂಸ್ಥೆಯ ವೆಬ್‌ಸೈಟ್ ಅಥವಾ ಆಪ್‌ನಲ್ಲಿ ಸ್ಥಿತಿಯನ್ನು ಪರಿಶೀಲಿಸಿ ಹೊರಡಬೇಕು. ಯಾವುದೇ ತೊಂದರೆಗಳಿದ್ದರೆ, ಪ್ರಯಾಣಿಕರಿಗೆ ವಾಟ್ಸಾಪ್ ಮತ್ತು ಇಮೇಲ್ ಮೂಲಕ ಮುಂಚಿತವಾಗಿ ತಿಳಿಸಲಾಗುತ್ತಿದೆ. ಅವರು ವಿಮಾನ ಟಿಕೆಟ್ಗಳನ್ನು ಮರುಪಾವತಿಯನ್ನು ಕೋರಬಹುದು ಎಂದು ಇಂಡಿಗೋ ಮಾಹಿತಿ ನೀಡಿದೆ (ಏಜೆನ್ಸೀಸ್).